ರಾಷ್ಟ್ರೀಯ

ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಸಮಾನ ಪಾಲಿಲ್ಲ: ಸುಪ್ರೀಂಕೋರ್ಟ್‌

Pinterest LinkedIn Tumblr

04-ANKANA-1fiಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ, 2005ಕ್ಕಿಂತ ಮುಂಚೆ ತಂದೆ ಮೃತಪಟ್ಟಿದ್ದು, ತನ್ನ ಪಾಲಿನ ಆಸ್ತಿಯನ್ನು ಗಂಡುಮಕ್ಕಳಿಗೆ ವಿಲ್‌ ಮಾಡಿಟ್ಟಿದ್ದರೆ ಹೆಣ್ಣುಮಕ್ಕಳು ತವರುಮನೆಯ ಆಸ್ತಿಯಲ್ಲಿ ಯಾವುದೇ ಪಾಲು ಕೇಳುವಂತಿಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005ರಲ್ಲಿ ಮಾಡಿರುವ ತಿದ್ದುಪಡಿ ಉತ್ತರಾನ್ವಯವಾಗುತ್ತದೆಯೇ ಹೊರತು ಪೂರ್ವಾನ್ವಯವಾಗುವುದಿಲ್ಲ.

ಪಿತ್ರಾರ್ಜಿತ ಆಸ್ತಿಗೆ ಗಂಡು ಹಾಗೂ ಹೆಣ್ಣುಮಕ್ಕಳು ಸಮಾನ ಪಾಲುದಾರರು ಎಂದು 2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಈ ಸಂಬಂಧಿ ವ್ಯಾಜ್ಯಗಳು ಕೋರ್ಟುಗಳಲ್ಲಿ ಹೆಚ್ಚೆಚ್ಚು ದಾಖಲಾಗುತ್ತಿವೆ. ಮದುವೆಯಾದ ಹೆಣ್ಣುಮಕ್ಕಳು ತವರುಮನೆಯ ಆಸ್ತಿಯಲ್ಲಿ ತನಗೆ ಪಾಲು ಬೇಕೆಂದು ಸೋದರರ ವಿರುದ್ಧ ಕೋರ್ಟಿಗೆ ಹೋಗುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಕೆಲವೆಡೆ ಗೊಂದಲಕಾರಿ ತೀರ್ಪುಗಳು ಹೊರಬಂದಿವೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಈ ಬಗ್ಗೆ ಸ್ಪಷ್ಟ ಆದೇಶವೊಂದನ್ನು ನೀಡಿದ್ದು, ಅದರಲ್ಲಿ ಬಹುತೇಕ ಗೊಂದಲಗಳು ಬಗೆಹರಿದಿವೆ. ಈ ತೀರ್ಪಿನ ಪ್ರಕಾರ 2005ಕ್ಕಿಂತ ಮೊದಲೇ ತಂದೆ ಮೃತಪಟ್ಟಿದ್ದರೆ ಹೆಣ್ಣು ಮಕ್ಕಳಿಗೆ ತವರುಮನೆಯ ಆಸ್ತಿಯಲ್ಲಿ ಸಮಾನ ಪಾಲು ಸಿಗುವುದಿಲ್ಲ. ಒಂದು ವೇಳೆ ತಂದೆ ತನ್ನ ಪಾಲಿನ ಆಸ್ತಿಯನ್ನೂ ಗಂಡುಮಕ್ಕಳಿಗೆ ವಿಲ್‌ ಮಾಡಿ 2005ಕ್ಕಿಂತ ಮೊದಲು ಮೃತಪಟ್ಟಿದ್ದರೆ ಆಗ ತವರುಮನೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಯಾವ ಪಾಲೂ ಸಿಗುವುದಿಲ್ಲ.

ಕಳೆದ ಅಕ್ಟೋಬರ್‌ 16ರಂದು ಸರ್ವೋಚ್ಚ ನ್ಯಾಯಾಲಯ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಶಾಸನ-2005 ಇದರ ಕುರಿತು ಬಹಳ ಮಹತ್ವದ ತೀರ್ಪು ನೀಡಿದೆ. ಸದ್ರಿ ಶಾಸನದ 2005ರ ತಿದ್ದುಪಡಿ ಪೂರ್ವಾನ್ವಯ (Retrospective) ಉಳ್ಳದ್ದೇ ಅಥವಾ ಕೇವಲ ಉತ್ತರಾನ್ವಯ (Prospective)ವೇ ಎಂಬುದರ ಕುರಿತು ದೇಶದ ಹಲವು ಉಚ್ಚ ನ್ಯಾಯಾಲಯಗಳಲ್ಲಿ ದಾವೆಗಳಿದ್ದವು. ಈ ಪ್ರಶ್ನೆಯ ಇತ್ಯರ್ಥಕ್ಕಾಗಿ ದಾವೆಗಳು ಇರುವ ಹೊತ್ತಿನಲ್ಲಿ ಒಮ್ಮತದ ಅಭಿಪ್ರಾಯವಿಲ್ಲದಿರುವುದರಿಂದ, ಸರ್ವೋಚ್ಚ ನ್ಯಾಯಾಲಯ ಈ ಕುರಿತು ಅಂತಿಮ ಹಾಗೂ ಅಧಿಕೃತ ಅಭಿಪ್ರಾಯ ನೀಡಿದೆ.

ಮುಖ್ಯವಾಗಿ ಹಿಂದೂ ಅವಿಭಕ್ತ ಕುಟುಂಬದಲ್ಲಿ ಮಗಳಿಗೆ ಮಗನಿಗಿರುವಂತೆ ಆಸ್ತಿಯಲ್ಲಿ ಜನ್ಮಸಿದ್ಧ ಹಾಗೂ ಸರಿಸಮಾನ ಹಕ್ಕು ಇರುತ್ತದೆ. ಮಗ ಮತ್ತು ಮಗಳು ಜನ್ಮಸಿದ್ಧ ಹಕ್ಕುಳ್ಳ ಸಮಷ್ಟಿ ಸದಸ್ಯರು (Coprceners) ಎಂದು ಈ ತಿದ್ದುಪಡಿ ಶಾಸನ ಹೇಳುತ್ತದೆ ಎಂಬುದಾಗಿ ನ್ಯಾಯಾಲಯ ಈ ತೀರ್ಪಿನಲ್ಲಿ ಘೋಷಿಸಿದೆ. ಅಲ್ಲದೆ, ಈ ಶಾಸನವು ಕೇವಲ ಉತ್ತರಾನ್ವಯವಾಗಿದೆ ಎಂದೂ ಸ್ಪಷ್ಟಪಡಿಸಿದೆ.

ಹಿನ್ನೆಲೆ ಏನು? ತೀರ್ಪು ಏನು?
ಸುಮಾರು 1956ಕ್ಕಿಂತ ಹಿಂದೆ ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೆ ತಾವು ಹುಟ್ಟಿ ಬೆಳೆದ ಕುಟುಂಬದ ಆಸ್ತಿಯಲ್ಲಿ ಕಾಯಿದೆಯನ್ವಯ ಜಾರಿಗೊಳಿಸಬಹುದಾದ ಯಾವುದೇ ಹಕ್ಕುಗಳಿರಲಿಲ್ಲ. ಪ್ರತಿಯೊಬ್ಬ ಮಗನೂ ಕುಟುಂಬದಲ್ಲಿ ಸಮಷ್ಟಿ ಸದಸ್ಯ (Coparcener), ಆಸ್ತಿಯಲ್ಲಿ ಆತನಿಗೆ ಜನ್ಮಸಿದ್ಧ ನಿರ್ದಿಷ್ಟ ಹಕ್ಕುಗಳಿದ್ದವು. ತಂದೆಯು ಕುಟುಂಬದ ಯಜಮಾನ, ಆತನಿಗೆ ಸಮನಾಗಿ ಮಗನೂ ಆಸ್ತಿಯಲ್ಲಿ ಪಾಲು ಪಡೆಯಬಹುದು. ಆದರೆ ತಾಯಿ, ಪತ್ನಿ ಮತ್ತು ಮಗಳಿಗೆ ಹಕ್ಕು ಇರಲಿಲ್ಲ. ಅವರು ಗಂಡು ಸದಸ್ಯರೊಂದಿಗೆ ಕೇವಲ ಉಂಡು ಬದುಕುವ ಸದಸ್ಯರು ಎಂಬುದಾಗಿತ್ತು.

ಗಂಡು ಮತ್ತು ಹೆಣ್ಣಿನ ನಡುವಿನ ಈ ವಿಧದ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ಸಂಸತ್ತು 1956ರಲ್ಲಿ ಹಿಂದೂ ಉತ್ತರಾಧಿಕಾರ ಶಾಸನವನ್ನು ರಚಿಸಿತು. ಆದರೆ ಈ ಶಾಸನದ ಪ್ರಕಾರವೂ ಮಗ ಮತ್ತು ಮಗಳು ಕುಟುಂಬದ ಆಸ್ತಿಯಲ್ಲಿ ಸರಿಸಮಾನ ಪಾಲುದಾರರಲ್ಲ. ಈ ಶಾಸನದ ಕರಡು ಸಿದ್ಧಪಡಿಸಿದ ಕಾರ್ಯದರ್ಶಿ ಬೆನಗಲ್‌ ನರಸಿಂಗರಾಯರು ಮತ್ತು ಅದನ್ನು ಸಂಸತ್ತಿನಲ್ಲಿ ಮಂಡಿಸಿದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಕಲ್ಪನೆಯ ಆದರ್ಶ ಹಿಂದೂ ಉತ್ತರಾಧಿಕಾರ ಶಾಸನದ ವಿರೂಪಪಡಿಸಿದ ಹೃಸ್ವರೂಪ ಮಾತ್ರ ಅದಾಗಿತ್ತು. ಈ ಕಾಯಿದೆಯಂತೆ ಹಿಂದೂ ಕುಟುಂಬದ ಉತ್ತರಾಧಿಕಾರಿ ತಂದೆಯು ವೀಲುನಾಮೆ ಬರೆಯದೆ ಮೃತಪಟ್ಟರೆ ಮಾತ್ರ ಕುಟುಂಬದ ಆಸ್ತಿಯಲ್ಲಿ ಆತನಿಗೆ ಇರುವ ಆಂಶಿಕ ಹಕ್ಕು ಗಂಡು ಮತ್ತು ಹೆಣ್ಣುಮಕ್ಕಳು, ತಾಯಿ ಮತ್ತು ಪತ್ನಿಗೆ ಸರಿಸಮಾನವಾಗಿ ಬರತಕ್ಕದ್ದು. ಉದಾಹರಣೆಗೆ, ಒಬ್ಬನಿಗೆ ತಾಯಿ, ಪತ್ನಿ; ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಇರುವುದಾದರೆ, ಆತನು ಮತ್ತು ಇಬ್ಬರು ಗಂಡುಮಕ್ಕಳು ಜನ್ಮಸಿದ್ಧ ಹಕ್ಕುಳ್ಳ ಸಮಷ್ಟಿ ಸದಸ್ಯ (Coparcener) ರಾಗಿರುತ್ತಾರೆ. ಆದುದರಿಂದ ಪ್ರತಿಯೊಬ್ಬನೂ ಮೂರನೇ ಒಂದು ಅಂಶ ಆಸ್ತಿಗೆ ಹಕ್ಕುದಾರರು. ಯಜಮಾನ (ತಂದೆ) ಮೃತಪಟ್ಟಾಗ ಆತನದ್ದಾದ ಮೂರನೇ ಒಂದು ಅಂಶದ ಆಸ್ತಿಯಲ್ಲಿ ತಾಯಿ, ಪತ್ನಿ ಮತ್ತು ಗಂಡು ಹಾಗೂ ಹೆಣ್ಣುಮಕ್ಕಳು ಸರಿಸಮಾನ ಪಾಲುದಾರರಾಗಿ ಪಾಲು ಪಡೆಯತಕ್ಕದ್ದು. ಯಜಮಾನ ತಂದೆ, ಆತನ ಮೂರನೇ ಒಂದು ಅಂಶವನ್ನು ವೀಲನಾಮೆ ಮೂಲಕ ಅವನಿಚ್ಛೆಯಂತೆ ಯಾರಿಗೂ ಕೊಡಬಹುದು. ಆ ಕಾರಣದಿಂದ ಬಹು ಮಂದಿ ತಂದೆಯಂದಿರು ಮೃತಪಡುವ ಮುಂಚೆಯೇ ವೀಲುನಾಮೆ ಬರೆದು ಅವರ ಆಂಶಿಕ ಹಕ್ಕನ್ನು ಗಂಡುಮಕ್ಕಳಿಗೆ ಮಾತ್ರ ಮೀಸಲಿಡುತ್ತಾರೆ ಅಥವಾ ಇಡುತ್ತಿದ್ದರು.

ಈ ಲೋಪವನ್ನು ನಿವಾರಿಸಿ ಗಂಡು ಮತ್ತು ಹೆಣ್ಣುಮಕ್ಕಳೊಳಗೆ ಸರಿಸಮಾನವಾಗಿ ಕುಟುಂಬದ ಆಸ್ತಿಯ ಹಂಚಿಕೆಯನ್ನು ಸಾಧಿಸುವ ಉದ್ದೇಶದಿಂದ 1956ರ ಶಾಸನವನ್ನು 2005ರಲ್ಲಿ ತಿದ್ದುಪಡಿಗೊಳಿಸಲಾಯಿತು. ಈ ತಿದ್ದುಪಡಿ ಶಾಸನ 2005ರ ಸೆಪ್ಟಂಬರ್‌ 9ರಂದು ಜಾರಿಗೆ ಬಂದಿದೆ. ಈ ಶಾಸನವು ಆ ದಿನದಿಂದ ಮುಂದಕ್ಕೆ ಮಾತ್ರ ಅನ್ವಯಿಸತಕ್ಕದ್ದೆಂದು ಬರೆದಿರುವುದರಿಂದ, ಅದು ಪೂರ್ವಾನ್ವಯವಾಗಲಾರದು. ಆದುದರಿಂದ ದಿನಾಂಕ 9-9-2005ರಿಂದ ಈಚೆಗೆ ಮಾತ್ರ ಗಂಡು ಮತ್ತು ಹೆಣ್ಣುಮಕ್ಕಳು ಕುಟುಂಬದ ಆಸ್ತಿಯಲ್ಲಿ ಸರಿಸಮಾನ ಹಕ್ಕುಳ್ಳವರು. ಆ ದಿನಾಂಕಕ್ಕಿಂತ ಮೊದಲು ಹೆಣ್ಣುಮಕ್ಕಳಿಗೆ ಕುಟುಂಬದ ಆಸ್ತಿಯಲ್ಲಿರುತ್ತಿದ್ದ ಹಕ್ಕು ಗಂಡುಮಕ್ಕಳಿಗಿಂತ ಕಡಿಮೆಯಾಗಿದ್ದುದರಿಂದ, ಸರಿಸಮಾನ ಹಕ್ಕು ಪಡೆಯಲು ಸಾಧ್ಯವಿಲ್ಲ.

ಹಿಂದೂ ಕುಟುಂಬದ ಯಜಮಾನನು ಈ ತಿದ್ದುಪಡಿ ಶಾಸನ ಜಾರಿಗೊಳ್ಳುವ ಮುಂಚೆಯೇ, ಅಂದರೆ 2005ರ ಸೆಪ್ಟೆಂಬರ್‌ 9ಕ್ಕಿಂತ ಮುಂಚೆ, ಮೃತಪಟ್ಟಿದ್ದರೆ ಹೆಣ್ಣುಮಕ್ಕಳು ಈ ಶಾಸನದಡಿಯಲ್ಲಿ ಮಗನಿಗೆ ಸರಿಸಮಾನವಾಗಿ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ. ಈ ಶಾಸನ ಜಾರಿಗೊಳ್ಳುವ ದಿನದಂದು ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿರಲೇಬೇಕು. ಈ ತಿದ್ದುಪಡಿ ಶಾಸನದ ವ್ಯಾಪ್ತಿಯಲ್ಲಿ ಕುಟುಂಬದ ಯಜಮಾನನ ಪತ್ನಿ ಮತ್ತು ತಾಯಿ ಬರುವುದಿಲ್ಲ. ಈ ತಿದ್ದುಪಡಿ ಶಾಸನವು ನ್ಯಾಯಾಲಯದಲ್ಲಿ ಈಗ ತನಿಖೆಯಲ್ಲಿರುವ ದಾವೆಗಳಿಗೂ ಅನ್ವಯಿಸುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟ ಘೋಷಣೆ ಇದೆ. ಈ ಶಾಸನಕ್ಕೆ ಪೂರ್ವಾನ್ವಯವಿದೆ ಎಂಬ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ.

ಅಂದರೆ, 2005ಕ್ಕಿಂತ ಮುಂಚೆಯೇ ತಂದೆ ಮೃತಪಟ್ಟಿದ್ದರೆ ಆತನ ಹೆಣ್ಣುಮಕ್ಕಳು ಸೋದರರಿಂದ ಆಸ್ತಿಯಲ್ಲಿ ಸಮಾನ ಪಾಲು ಕೇಳುವಂತಿಲ್ಲ. ಬದಲಿಗೆ, ಒಟ್ಟು ಕುಟುಂಬದ ಆಸ್ತಿಯಲ್ಲಿ ತಂದೆಯ ಪಾಲಿನ ಆಸ್ತಿ ಏನಿರುತ್ತಿತ್ತೋ ಅದರಲ್ಲಿ ಪಾಲು ಕೇಳಬಹುದು. ಆದರೆ, 2005ಕ್ಕಿಂತ ಮುಂಚೆ ತಂದೆ ಸಾಯುವ ಮೊದಲು ತನ್ನ ಆಸ್ತಿ ಗಂಡುಮಕ್ಕಳಿಗೆ ಸಲ್ಲತಕ್ಕದ್ದು ಎಂದು ಬರೆದಿಟ್ಟಿದ್ದರೆ ಆ ಆಸ್ತಿಯಲ್ಲೂ ಪಾಲು ಕೇಳುವಂತಿಲ್ಲ. ವಿಲ್‌ ಬರೆಯದೆ ಮೃತಪಟ್ಟಿದ್ದರೆ ಮಾತ್ರ ತಂದೆಯ ಪಾಲಿನ ಆಸ್ತಿಯಲ್ಲಿ ಪಾಲು ಕೇಳಬಹುದು.

ಇನ್ನೊಂದು ಪ್ರಮುಖ ಅಂಶವೆಂದರೆ, 2005ಕ್ಕಿಂತ ಮುಂಚೆ ಮೃತಪಟ್ಟ ತಂದೆಯ ಆಸ್ತಿಯಲ್ಲಿ 2005ರ ನಂತರ ಪಾಲು ಕೇಳುವುದಾದರೆ ಹೆಣ್ಣುಮಕ್ಕಳು ಬದುಕಿರಬೇಕು. ಅವರು ಮೃತಪಟ್ಟಿದ್ದರೆ ಅವರ ಪರವಾಗಿ ಅವರ ಮಕ್ಕಳು ಪಾಲು ಕೇಳುವಂತಿಲ್ಲ.

ತಾರತಮ್ಯ ಇನ್ನೂ ಇದೆ
ನನಗನ್ನಿಸುವಂತೆ, ಕುಟುಂಬದ ಯಜಮಾನನ ಪತ್ನಿ ಮತ್ತು ತಾಯಿ, ಯಜಮಾನನ ಮೃತ್ಯುವಿನ ಬಳಿಕವೂ ಕುಟುಂಬದ ವಾಸದ ಮನೆಯಲ್ಲಿ ವಾಸಿಸುವ ಮತ್ತು ಆತನಕ ಇದ್ದಂತೆ ಸಕಲ ಸೌಕರ್ಯ ಸೌಲಭ್ಯಗಳನ್ನು ಪಡೆಯುತ್ತ ಜೀವಿಸುವ ಹಕ್ಕು ಹಾಗೂ ಅಧಿಕಾರವನ್ನು ಒಟ್ಟು ಆಸ್ತಿಯ ಜವಾಬ್ದಾರಿಯಲ್ಲಿ ಪಡೆಯುವಂತೆ ಕೂಡ ತಿದ್ದುಪಡಿ ಶಾಸನದಲ್ಲಿ ಸ್ಪಷ್ಟ ಘೋಷಣೆ ಇರಬೇಕಿತ್ತು. ಪತ್ನಿ ಮತ್ತು ತಾಯಿಯ ಜೀವನದ ಹಕ್ಕನ್ನು ಶಾಸನ ದೃಢಪಡಿಸಿದ್ದರೆ ತಾರತಮ್ಯವನ್ನು ಸಂಪೂರ್ಣ ಹೋಗಲಾಡಿಸಬಹುದಿತ್ತು. ಆ ತನಕ ಕಾಯಿದೆಯ ಉದ್ದೇಶ ಅಸಂಪೂರ್ಣ.
-ಎ.ಪಿ.ಗೌರೀಶಂಕರ, ಹಿರಿಯ ವಕೀಲರು
-ಉದಯವಾಣಿ

2 Comments

  1. Manjunath Subrahmanyam

    Well defined logic by the SC. The true colours of Girls influenced by their greedy husbands gets exposed. Great thing that Will made by father also has got a mention.

  2. The SC ruling says that there is “Equal Share” is not applicable to girl child. But never says that Girls will not have ANY share. Also it is silent in cases there is no will made by father.

Write A Comment