ಫರೀದಾಬಾದ್: ವೈದ್ಯರು ಬಾಲಕನ ಹೊಟ್ಟೆಯಿಂದ 29 ಅಯಸ್ಕಾಂತ ತುಂಡುಗಳು ಒಂದು ನಾಣ್ಯ ಮತ್ತು ಒಂದು ಕೈಗಡಿಯಾರದ ಬ್ಯಾಟರಿಯನ್ನು ಹೊರತೆಗೆದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಥುರಾದ ನಿವಾಸಿಯಾದ 3 ವರ್ಷದ ಪ್ರಿನ್ಸ್ ಕಳೆದ ಒಂದು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಮೊದಮೊದಲು ವೈದ್ಯರ ಬಳಿ ಹೋದಾಗ ನೋವಿಗೆ ಸೂಕ್ತ ಕಾರಣ ತಿಳಿಯದೆ ನೋವು ನಿವಾರಕ ಔಷಧಗಳನ್ನು ಕೊಟ್ಟು ಕಳಿಸುತ್ತಿದ್ದರು.
ಆದರೆ ದಿನಕಳೆದಂತೆಲ್ಲ ಬಾಲಕನಿಗೆ ಹೊಟ್ಟೆನೋವು ಜಾಸ್ತಿಯಾದ ಕಾರಣ ಆತನನ್ನು ಫರೀದಾಬಾದ್‍ನ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಕೂಡ ಹೊಟ್ಟೆನೋವಿಗೆ ಕಾರಣ ತಿಳಿಯದೆ ಎಕ್ಸ್-ರೇ ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು. ಎಕ್ಸ್-ರೇ ರಿಪೋರ್ಟ್ ನೋಡಿದ ವೈದ್ಯರಿಗೆ ಬಾಲಕನ ಹೊಟ್ಟೆಯಲ್ಲಿ ಲೋಹದ ವಸ್ತುಗಳು ಸಂಗ್ರಹವಾಗಿರುವುದು ತಿಳಿದುಬಂದಿದೆ. ಆದರೆ ಆ ವಸ್ತುಗಳು ಏನಿರಬಹುದು ಎಂದು ಆಪರೇಷನ್ ಮಾಡುವವರೆಗೂ ಸ್ಪಷ್ಟವಾಗಿರಲಿಲ್ಲ.
ಆದರೆ ಸತತ 3 ಗಂಟೆಗಳ ಆಪರೇಷನ್ ಬಳಿಕ ಬಾಲಕನ ಹೊಟ್ಟೆಯಲ್ಲಿದ್ದ 29 ಅಯಸ್ಕಾಂತ ತುಂಡುಗಳು, ಒಂದು ನಾಣ್ಯ ಮತ್ತು ಒಂದು ರಿಸ್ಟ್ ವಾಚಿನ ಬ್ಯಾಟರಿಯನ್ನು ನೋಡಿ ವೈದ್ಯರು ಕೂಡ ದಂಗಾದರು.
ಪ್ರಿನ್ಸ್ ಸತತ ಒಂದು ವರ್ಷದಿಂದ ತನ್ನ ಮನೆಯಲ್ಲಿ ಕೈಗೆ ಸಿಕ್ಕ ಅಯಸ್ಕಾಂತ ತಿಂದಿದ್ದರಿಂದ ಅವು ಒಂದಕ್ಕೊಂದು ಅಂಟಿಕೊಂಡು ದೊಡ್ಡ ಉಂಡೆಯಾಗಿ ಬಾಲಕನ ಹೊಟ್ಟೆನೋವಿಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದರು. ಇದೀಗ ಲೊಹದ ವಸ್ತುಗಳನ್ನು ಹೊರತೆಗೆಯಲಾಗಿದ್ದು ಬಾಲಕ ಆರೋಗ್ಯವಾಗಿದ್ದಾನೆ.
