ರಾಷ್ಟ್ರೀಯ

ಲೋಕಸಭೆಯಲ್ಲಿ ಅಸಹಿಷ್ಣುತೆಯ ಕಾವು

Pinterest LinkedIn Tumblr

Kavu

ಹೊಸದಿಲ್ಲಿ, ನ.30: ಲೋಕಸಭೆಯಲ್ಲಿ ಇಂದು ಅಸಹಿಷ್ಣುತೆ ಕುರಿತು ಕಾವೇರಿದ ಚರ್ಚೆ ನಡೆಯಿತು. ಗೃಹ ಸಚಿವ ರಾಜ್‌ನಾಥ್ ಸಿಂಗ್ ಕೆಲವೊಂದು ಹಿಂದುತ್ವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಿಪಿಎಂ ಸದಸ್ಯರೊಬ್ಬರು ಆರೋಪಿಸಿದಾಗ ಸದನದಲ್ಲಿ ಗದ್ದಲ ನೆಲೆಸಿತು. ತಾನು ಅಂಥ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ರಾಜ್‌ನಾಥ್ ಸಿಂಗ್ ಹೇಳಿದರು ಹಾಗೂ ಸಿಪಿಎಂ ಸದಸ್ಯ ಕ್ಷಮೆ ಕೋರಬೇಕೆಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸಿಂಗ್ ಹಿಂದುತ್ವ ಪರ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದಾಗಿ ಪತ್ರಿಕೆಯೊಂದನ್ನು ಉಲ್ಲೇಖಿಸಿ ಮುಹಮ್ಮದ್ ಸಲೀಂ ಹೇಳಿದರು.

ಇದನ್ನು ಖಂಡತುಂಡವಾಗಿ ನಿರಾಕರಿಸಿದ ಸಿಂಗ್, ತನ್ನ ಸಂಸತ್ ಜೀವನದಲ್ಲಿ ಇಂದಿನಷ್ಟು ತಾನು ಯಾವತ್ತೂ ನೊಂದಿಲ್ಲ ಎಂದು ಹೇಳಿದರು.

‘‘ಮುಹಮ್ಮದ್ ಸಲೀಂ ನನ್ನ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ನಾನು ಇಂಥ ಹೇಳಿಕೆಯನ್ನು ಎಲ್ಲಿ ಮತ್ತು ಯಾವಾಗ ನೀಡಿದ್ದೇನೆ ಎನ್ನುವುದನ್ನು ಅವರು ಹೇಳಬೇಕು, ಇಲ್ಲವೇ ಕ್ಷಮೆ ಯಾಚಿಸಬೇಕು… ಇಂಥ ಹೇಳಿಕೆಗಳನ್ನು ನೀಡುವ ಗೃಹ ಸಚಿವರಿಗೆ ಗೃಹ ಸಚಿವರಾಗುವ ನೈತಿಕ ಹಕ್ಕಿಲ್ಲ. ಪ್ರತಿ ಪದವನ್ನು ತೂಗಿಯೇ ನಾನು ಮಾತನಾಡುತ್ತೇನೆ. ಇಂಥ ಹೇಳಿಕೆಯನ್ನು ರಾಜ್‌ನಾಥ್ ಸಿಂಗ್ ನೀಡುವುದಿಲ್ಲ ಎಂದು ಜನರಿಗೆ ಗೊತ್ತು’’ ಎಂದು ಸಿಂಗ್ ಹೇಳಿದರು.
ಆರೆಸ್ಸೆಸ್‌ನ ಆಂತರಿಕ ಸಭೆಯೊಂದರಲ್ಲಿ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಪತ್ರಿಕೆಯನ್ನು ಉಲ್ಲೇಖಿಸಿ ಸಲೀಂ ಹೇಳಿದರು.
ಇಂಥ ಹೇಳಿಕೆಯನ್ನು ನೀಡುವಾಗ ನೀವು ಅಲ್ಲಿದ್ದಿರೇ ಎಂದು ಕೆಲವು ಬಿಜೆಪಿ ಸದಸ್ಯರು ಪ್ರಶ್ನಿಸಿದಾಗ, ‘‘ಆರೆಸ್ಸೆಸ್ ಸಭೆಗೆ ಹಾಜರಾಗುವಂಥ ದುರದೃಷ್ಟ ನನಗೆ ಬಂದಿಲ್ಲ’’ ಎಂದು ಸಿಪಿಎಂ ಸದಸ್ಯ ತಿರುಗೇಟು ನೀಡಿದರು.
ವರದಿಯ ಋಜುತ್ವ ಸೇರಿದಂತೆ ಎಲ್ಲ ಮಗ್ಗುಲುಗಳನ್ನು ಪರಿಶೀಲಿಸಿ ಸ್ಪೀಕರ್ ಸುಮಿತ್ರಾ ಮಹಾಜನ್ ನಿರ್ಧಾರವೊಂದನ್ನು ತೆಗೆದುಕೊಳ್ಳುವವರೆಗೆ ಸಲೀಂ ಈ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ರಾಜೀವ್ ಪ್ರತಾಪ್ ರೂಢಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಉಭಯ ಬಣಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಾಗ ಹಾಗೂ ಸದನ ಗದ್ದಲದ ಗೂಡಾದಾಗ ಸ್ಪೀಕರ್ ಸುಮಿತ್ರಾ ಮಹಾಜನ್ ಸದನವನ್ನು ಒಂದು ಗಂಟೆಯ ಅವಧಿಗೆ ಮುಂದೂಡಿದರು. ತಾನು ಯಾವುದೇ ಆರೋಪವನ್ನು ಮಾಡುತ್ತಿಲ್ಲ ಹಾಗೂ ಸಿಂಗ್ ಮೇಲೆ ಕೆಸರೆರಚುತ್ತಲೂ ಇಲ್ಲ ಎಂದು ಹೇಳಿದ ಸಲೀಂ, ತಾನು ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದನ್ನು ಮಾತ್ರ ಸದನದಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದರು. ಗೃಹ ಸಚಿವರಾಗಲಿ, ಸರಕಾರವಾಗಲಿ ಈ ವರದಿಯನ್ನು ಈವರೆಗೆ ನಿರಾಕರಿಸಿಲ್ಲ ಎಂದರು.

Write A Comment