ರಾಷ್ಟ್ರೀಯ

ಸಚಿವರೊಂದಿಗೆ ವಾಗ್ವಾದ ಮಾಡಿದ್ದ ಮಹಿಳಾ ಅಧಿಕಾರಿ ಎತ್ತಂಗಡಿ ! ಪ್ರಾಮಾಣಿಕತೆಯೇ ಆಕೆಗೆ ಮುಳುವಾಯಿತೆ…?

Pinterest LinkedIn Tumblr

28woman-transfer

ಫತೇಹ್ ಬಾದ್: ಸುದ್ದಿಗೋಷ್ಠಿಯಲ್ಲಿ ಹರ್ಯಾಣ ಸಚಿವರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಹರ್ಯಾಣ ಸರ್ಕಾರ ಆದೇಶ ಹೊರಡಿಸಿದೆ.

ಅಕ್ರಮ ಮಧ್ಯ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಫತೇಹ್ ಬಾದ್ ನಲ್ಲಿ ನಡೆದಿದ್ದ ಸುದ್ದಿಗೋಷ್ಛಿ ವೇಳೆ ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಮತ್ತು ಪೊಲೀಸ್ ಅಧಿಕಾರಿ ಸಂಗೀತಾ ಕಾಲಿಯಾ ಅವರ ನಡುವೆ ನಡೆದ ವಾಕ್ಸಮರ ದಕ್ಷ ಅಧಿಕಾರಿಯ ವರ್ಗಾವಣೆಯಲ್ಲಿ ಅಂತ್ಯಕಂಡಿದೆ. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಸಂಗೀತಾ ಕಾಲಿಯಾ ಅವರನ್ನು ಹರ್ಯಾಣ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ವರ್ಗಾವಣೆಗೆ ನಿಖರ ಕಾರಣ ಮಾತ್ರ ಸರ್ಕಾರ ತಿಳಿಸಿಲ್ಲ.

ಹರ್ಯಾಣ ಸರ್ಕಾರದ ಈ ದಿಢೀರ್ ನಿರ್ಧಾರದ ವಿರುದ್ಧ ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ಸಚಿವರ ಮುಂದೆ ಧೈರ್ಯವಾಗಿ ಮಾತನಾಡಿದ ದಕ್ಷ ಅಧಿಕಾರಿ ಸಂಗೀತಾ ಕಾಲಿಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಐಪಿಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಅಮಿತಾಬ್ ಠಾಕುರ್ ಅವರು ಸಂಗೀತಾ ಕಾಲಿಯಾ ಅವರ ಬೆಂಬಲಕ್ಕೆ ನಿಂತಿದ್ದು, ಓರ್ವ ದಕ್ಷ ಅಧಿಕಾರಿಯಾಗಿ ಸಂಗೀತಾ ಕಾಲಿಯಾ ಅವರು ಇಲಾಖೆಯ ಮಾನ ಕಾಪಾಡಿದ್ದಾರೆ. ಸಾರ್ವಜನಿಕವಾಗಿ ಸಚಿವರೊಬ್ಬರು ಪೊಲೀಸ್ ಇಲಾಖೆಯ ವಿರುದ್ಧ ಮಾತನಾಡುತ್ತಿದ್ದರೆ, ಓರ್ವ ಅಧಿಕಾರಿಯಾಗಿ ಸಂಗೀತಾ ಕಾಲಿಯಾ ಅವರು ಇಲಾಖೆಯ ಪರವಾಗಿ ಮಾತನಾಡಿದ್ದಾರೆ. ನಿಜ ಹೇಳಬೇಕು ಎಂದರೆ ಸಚಿವ ಅನಿಲ್ ವಿಜ್ ಅವರೇ ಸಮವಸ್ತ್ರದಲ್ಲಿರುವ ಓರ್ವ ಅಧಿಕಾರಿಯ ವಿರುದ್ಧ ಅನಧಿಕೃತವಾಗಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇತ್ತ ಹರ್ಯಾಣ ಸಚಿವ ಅನಿಲ್ ವಿಜ್ ನಡೆ ಕುರಿತಂತೆ ರಾಜಕೀಯ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಸರ್ಕಾರದ ಸೊಕ್ಕನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕೂಡ ಘಟನೆಯನ್ನು ವಿರೋಧಿಸಿದ್ದು, ಓರ್ವ ಸಚಿವನಾಗಿ ಸಾರ್ವಜನಿಕವಾಗಿ ಅನಿಲ್ ವಿಜ್ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳನ್ನು ದೂಷಿಸುವ ರಾಜಕಾರಣಿಗಳಿಗೆ ಹರ್ಯಾಣದ ಮಹಿಳಾ ಪೊಲೀಸ್ ಅಧಿಕಾರಿ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

Write A Comment