ರಾಷ್ಟ್ರೀಯ

ದೇಶದಲ್ಲಿ ಅಸಹಿಷ್ಣುತೆ ಇದೆ ಎನ್ನುವುದು ಮಹಾನ್ ಸುಳ್ಳು ಎಂದ ವಿತ್ತ ಸಚಿವ ಅರುಣ್ ಜೇಟ್ಲಿ

Pinterest LinkedIn Tumblr

arun

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಇದೆ ಎನ್ನುವುದು ಮಹಾನ್ ಸುಳ್ಳು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಜೇಟ್ಲಿ, ಅಸಹಿಷ್ಣುತೆ ಇದೆ ಎಂಬುದು ಸುಳ್ಳು, ಒಂದುವೇಳೆ ಇದೆ ಎನ್ನುವುದಾದರೆ ಅಸಹಿಷ್ಣುತೆ ಎಲ್ಲಿದೆ. ಹೇಗಿದೆ ಅಂತ ಕಾಂಗ್ರೆಸ್ ಎತ್ತಿ ತೋರಿಸಲಿ. ವಿನಾಕಾರಣ ಬೊಬ್ಬೆ ಹೊಡೆದರೆ ದೇಶದಲ್ಲಿನ ಸಹಿಷ್ಣುತೆ ಮರೆಯಾಗಲ್ಲ. ಭಾರತದಲ್ಲಿನ ವೈವಿದ್ಯತೆ ಹಾಗೂ ಸಹಿಷ್ಣುತೆ ಎಂದೆಂದಿಗೂ ಶಾಶ್ವತ ಎಂದರು.

ಸೂಕ್ತ ನ್ಯಾಯ ಸಿಗದಿದ್ದರೆ ಅದೇ ಅಸಹಿಷ್ಣುತೆ ಎಂದಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದಲ್ಲಿ ಧರ್ಮಗಳ ಅಸಹಿಷ್ಣುತೆ ಇಲ್ಲವೆಂದು ಹೇಳಿದ್ದರು. ಅಸಹಿಷ್ಣುತೆಗೆ ಉತ್ತಮ ಉದಾಹರಣೆ ಎಂದರೆ ಅದು ತುರ್ತು ಪರಿಸ್ಥಿತಿ. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿ ದೇಶದಲ್ಲಿ ಜನರು ಬದುಕುವ ಹಕ್ಕನ್ನೇ ಕಳೆದುಕೊಂಡಿದ್ದರು. ಅಂದಿನ ಇಂದಿರಾ ಸರ್ಕಾರ ದೇಶದ ಶೇ.30ರಷ್ಟು ಜನರನ್ನು ಜೈಲಿಗೆ ತಳ್ಳಿತ್ತು. ಸಂವಿಧಾನ ಇದೆ ಎನ್ನುವುದನ್ನೇ ಸರ್ಕಾರ ಮರೆತು ಹೋಗಿತ್ತು ಎಂದು ಜೇಟ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸರ್ವಾಧಿಕಾರ ತೋರಿದ್ದ ಇಂದಿರಾ ಗಾಂಧಿಗೆ ಜನರೇ ಪಾಠ ಕಲಿಸಿದ್ದರು. ಆದರೂ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಬುದ್ಧಿಲ್ಲ. ಪಾಠ ಕಲಿತಂತಿಲ್ಲ. ನಿಜವಾದ ಅಸಹಿಷ್ಣುತೆ ಎಂದರೆ ತುರ್ತು ಪರಿಸ್ಥಿತಿ ಎಂದು ಕಾಂಗ್ರೆಸ್ ಆರೋಪಕ್ಕೆ ಜೇಟ್ಲಿ ತಿರುಗೇಟು ನೀಡಿದರು.

ಕಾಂಗ್ರೆಸ್ ಸಂವಿಧಾನದಲ್ಲಿನ ಹಲವು ಕಾನೂನಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೆ ಕಾಂಗ್ರೆಸ್. ಆದರೆ ಈಗ ಅದನ್ನು ವಿರೋಧಿಸುತ್ತಿದೆ. ಇದರಿಂದ ಕಾಂಗ್ರೆಸ್‌ನ ದ್ವಿಮುಖ ರಾಜಕಾರಣ ತಿಳಿಯುತ್ತದೆ ಎಂದರು.

Write A Comment