ರಾಷ್ಟ್ರೀಯ

ಒಂದು ಕಾಲದಲ್ಲಿ ಈತ ಮಾಡಿದ್ದು ಬರೋಬರಿ 18 ಕೊಲೆ, 100 ಕಳ್ಳತನ, ದರೋಡೆ ! ಈಗ ಅದೆಲ್ಲಾ ಬಿಟ್ಟು ಆಗಿದ್ದಾನೆ ಟೀ ವ್ಯಾಪಾರಿ…ಈತ ಯಾರು..? ಇಲ್ಲಿದೆ ಸಂಪೂರ್ಣ ವರದಿ…

Pinterest LinkedIn Tumblr

S Prasad Reddy

ಹೈದರಾಬಾದ್: ಒಂದು ಬಾರಿ ಅಪರಾಧಿ ಅನ್ನಿಸಿಕೊಂಡವ ನಂತರ ಯಾವತ್ತಿಗೂ ಅಪರಾಧಿಯೇ ಎಂಬುದು ಜನಜನಿತ ಮಾತು. ಆದರೆ ಇಲ್ಲೊಬ್ಬ ಈ ಮಾತನ್ನು ತಪ್ಪು ಎಂದು ಸಾಬೀತುಪಡಿಸಲು ಹೊರಟಿದ್ದಾನೆ.

ನಾವಿಲ್ಲಿ ಹೇಳಹೊರಟಿರುವುದು ರಾಕ್ಷಸ ಪ್ರವೃತ್ತಿಯ ವ್ಯಕ್ತಿಯೊಬ್ಬ ನಿಜವಾದ ಮನುಷ್ಯನಾಗಿ ಬದಲಾದ ಕಥೆ. ಒಂದು ಸಮಯದಲ್ಲಿ ಕೊಲೆ, ಸುಲಿಗೆ, ದರೋಡೆಯನ್ನೇ ವೃತ್ತಿ ಮಾಡಿಕೊಂಡು ಜೀವನ ಕಳೆಯುತ್ತಿದ್ದವ ಇಂದು ಕಷ್ಟಪಟ್ಟು ದುಡಿದು ಚಹಾ ಮಾರಿ ಚೆಂದದ ಬದುಕು ಸಾಗಿಸುತ್ತಿದ್ದಾನೆ.

ಆತನ ಹೆಸರು ಎಸ್. ಪ್ರಸಾದ್ ರೆಡ್ಡಿ. ಮೂಲತಃ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವನು. ಕುಟುಂಬದವರ, ಪೋಷಕರ ಪ್ರೀತಿ ಸಿಗದೆ, ಶಿಕ್ಷಣ ಗಳಿಸದೆ ಕೆಟ್ಟ ಜನರ ಸಹವಾಸ, ಸಂಪರ್ಕ ಬೆಳೆಯಿತು.ಅದು ನಿಧಾನವಾಗಿ ಆತನನ್ನು ಅಪರಾಧ ಲೋಕಕ್ಕೆ ಎಳೆಯಿತು. ಕಷ್ಟಪಡದೆ ಹಣ ಸಂಪಾದನೆ ಮಾಡುವ ಆಲೋಚನೆ ತಲೆಯಲ್ಲಿ ಹುಟ್ಟುಕೊಂಡಿತು. 20ನೇ ವರ್ಷಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ತಂಡದ ನಂಟು ಬೆಳೆಯಿತು. ಅಲ್ಲಿ ತನ್ನ ಅಮೂಲ್ಯವಾದ 24 ವರ್ಷಗಳನ್ನು ಅವರ ಜೊತೆಯೇ ಕತ್ತಲೆ ಲೋಕದಲ್ಲಿ ಕಳೆದನು. ಅವರೊಟ್ಟಿಗೆ ಸೇರಿಕೊಂಡು ಹಣದ ಆಸೆಯಿಂದ ಕೊಲೆ, ಸುಲಿಗೆ, ರಕ್ತಪಾತದಲ್ಲಿ ತೊಡಗಿದನು. ನಾಲ್ಕು ವರ್ಷಗಳ ಕಾಲ ಮಾವೋವಾದಿ ಗುಂಪಿನ ಜೊತೆ ಇದ್ದನು. 2012ರಲ್ಲಿ ದಾವೂದ್ ಶಿಷ್ಯನಾಗಿದ್ದ ಅಶಪ್ಪ ಎಂಬವನ ಜೊತೆ ಸೇರಿಕೊಂಡು ಅವನೊಂದಿಗೆ ಪಾತಕ ಕೃತ್ಯಗಳಿಗೆ ಸಹಾಯ ಮಾಡುತ್ತಿದ್ದನು.ತನ್ನ ಶತ್ರುಗಳನ್ನು ಬಾಂಬು ಇಟ್ಟು ಸಾಯಿಸುತ್ತಿದ್ದನು. ಕೆಲವು ವರ್ಷಗಳ ಕಾಲ ಮುಂಬೈಯಲ್ಲಿ ಜೀವನ ಮಾಡಿದನು. ಟಿಡಿಪಿ ಮತ್ತು ವೈಎಸ್ ಆರ್ ಸಿ ನಾಯಕರ ಕುಕೃತ್ಯಗಳಿಗೂ ಕೈ ಜೋಡಿಸಿದ್ದಾನೆ. ಅನೇಕ ಸಲ ಜೈಲಿಗೆ ಹೋಗುವುದು, ಜಾಮೀನಿನ ಮೇಲೆ ಹೊರಬರುವುದು, ಮತ್ತೆ ಜೈಲಿಗೆ ಹೋಗುವುದು, ಮತ್ತೆ ಹೊರಬರು ವುದು ಹೀಗೆಯೇ ನಡೆಯುತ್ತಿದ್ದವು. ಇವನನ್ನು ಮುಗಿಸಿಬಿಡಲು ಕೆಲವರು ಸಂಚು ರೂಪಿಸಿದರು. ಆದರೆ ಹೇಗೋ ಸಾವಿನ ದವಡೆಯಿಂದ ಹೊರಬರುವಲ್ಲಿ ಯಶಸ್ವಿಯಾದನು. ಅವನೇ ಸ್ವತಹ ತನ್ನ ಆರು ಮಂದಿಯ ತಂಡ ಕಟ್ಟಿಕೊಂಡನು.ಇವರೆಲ್ಲಾ ಸೇರಿ ಕೊಲೆ, ದರೋಡೆ ಮಾಡಿ ಸಂಪಾದಿಸಿದ್ದು ಬರೋಬ್ಬರಿ 12 ಕೋಟಿ ರೂಪಾಯಿ.ಆರು ಜಾಮೀನುರಹಿತ ವಾರಂಟ್ ಗಳು ಅವನ ವಿರುದ್ಧ ಇವೆ. ಒಮ್ಮೆ ಹೈದರಾಬಾದಿನ ಚಂದನಗರ ಪೊಲೀಸರು ಅವನನ್ನು ಹಿಡಿದು ಅವನ ಬಳಿಯಿದ್ದ 9 ಮಿಲಿ ಮೀಟರ್ ಉದ್ದದ 10 ವಿದೇಶಿ ಪಿಸ್ತೂಲ್ ನ್ನು ವಶಪಡಿಸಿಕೊಳ್ಳುತ್ತಾರೆ. ನಂತರ ಬಿಟ್ಟುಬಿಡುತ್ತಾರೆ. ಮತ್ತೆ ಕಳೆದ ಏಪ್ರಿಲ್ ನಲ್ಲಿ ಪುನಹ ಹಿಡಿಯುತ್ತಾರೆ.

ಒಟ್ಟಾರೆ 18 ಕೊಲೆ, 100 ಕಳ್ಳತನ ಮಾಡಿದ್ದ ಪ್ರಸಾದ್ ಗೆ ಇಷ್ಟು ಹೊತ್ತಿಗೆ ಜೀವನದ ಒಂದು ಹಂತದಲ್ಲಿ ಇವೆಲ್ಲಾ ರೋಸಿ ಹೋಗುತ್ತದೆ. ತಾನು ಬದುಕುತ್ತಿರುವ ಕರಾಳ ಜೀವನದ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಇದಲ್ಲ ಜೀವನ ಎಂಬ ವಾಸ್ತವ ಅರಿವಿಗೆ ಬರುತ್ತದೆ. ಹಳೆಯ ಬದುಕಿನ ಪೊರೆ ಕಳಚಿ ಹೊಸ ಬದುಕು ಆರಂಭಿಸಬೇಕೆಂಬ ಬಯಕೆ ಮನದಲ್ಲಿ ಮೂಡುತ್ತದೆ. ತನ್ನ ಕುಟುಂಬದವರ ಜೊತೆ ಸೇರಬೇಕೆಂಬ ಅದಮ್ಯ ಬಯಕೆ ಉಂಟಾಗುತ್ತದೆ. ಅಶಪ್ಪನ ಸಂಗ ತೊರೆಯುತ್ತಾನೆ.

ಇಷ್ಟೊಂದು ಕೊಲೆ, ಸುಲಿಗೆ ಮಾಡಿ ಕ್ರಿಮಿನಲ್ ಎಂದು ಹಣೆಪಟ್ಟಿ ಹೊತ್ತವನನ್ನು ಸಮಾಜ ಏಕಾಏಕಿ ಸ್ವೀಕರಿಸುತ್ತದೆಯೇ? ತಾನಿನ್ನು ಅಪರಾಧ ಮಾಡುವುದಿಲ್ಲ ಎಂದಾಕ್ಷಣ ಅವನನ್ನು ನಂಬುವುದಕ್ಕೆ ಹೇಗೆ ಸಾಧ್ಯ? ಆತ ಪೊಲೀಸರಲ್ಲಿ ಗೋಗರೆಯುತ್ತಾನೆ. ತಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ. ನನಗೆ ಜೀವನದಲ್ಲಿ ಒಂದು ಅವಕಾಶ ಕೊಡಿ ಅಂತ ಅಂಗಲಾಚುತ್ತಾನೆ. ಆಗ ನೆರವಿಗೆ ಬಂದವರೇ ಹೈದರಾಬಾದಿನ ಸೈಬರಾಬಾದ್ ಪೊಲೀಸರು.ನಗರದ ಎಲ್.ಬಿ.ಕ್ರಾಸ್ ನಲ್ಲಿ ಪುಟ್ಟ ಚಹಾದ ಅಂಗಡಿ ತೆರೆಯಲು ಆರ್ಥಿಕ ಸಹಾಯ ನೀಡುತ್ತಾರೆ. ಪೊಲೀಸ್ ಠಾಣೆ ನಿರ್ವಹಣಾ ನಿಧಿಯಿಂದ 70 ಸಾವಿರ ರೂಪಾಯಿ ಮತ್ತು ಪೊಲೀಸರೇ ಸ್ವಲ್ಪ ಹಣವನ್ನು ತಮ್ಮ ಜೇಬಿನಿಂದ ಕೊಟ್ಟು ಅಂಗಡಿ ತೆರೆಯಲು ಸಹಾಯ ಮಾಡುತ್ತಾರೆ.

”ಹೊಸ ಜೀವನ ಆರಂಭಿಸಬೇಕೆನ್ನುವ ಇಂತಹ ಅಪರಾಧಿಗಳನ್ನು ನಾವು ಮೊದಲು ಕೌನ್ಸಿಲಿಂಗ್ ಮಾಡುತ್ತೇವೆ. ಕೆಲವರು ನಮಗೆ ಮೋಸ ಮಾಡಲು ನೋಡುತ್ತಾರೆ. ಅವರ ಮಾತಿನಲ್ಲಿ, ವರ್ತನೆಯಲ್ಲಿ ಗೊತ್ತಾಗುತ್ತದೆ. ಆದರೆ ಪ್ರಸಾದ್ ರೆಡ್ಡಿಯ ವಿಷಯದಲ್ಲಿ ಆತ ಪ್ರಾಮಾಣಿಕ ವ್ಯಕ್ತಿಯಾಗಿ ಬಾಳಲು ಯತ್ನಿಸುತ್ತಿದ್ದಾನೆ ಎಂದು ನಮಗನ್ನಿಸಿತು” ಎನ್ನುತ್ತಾರೆ ಡಿಸಿಪಿ ನವೀನ್ ಕುಮಾರ್.

ಸ್ವಲ್ಪ ಸಮಯ ಕಳೆದು ಇನ್ನೊಂದು ಅಪರಾಧ ಕೃತ್ಯವನ್ನು ನೀನು ಮಾಡಿದರೆ ಏನು ಮಾಡುವುದು ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿಗಾರರು ಕೇಳಿದಾಗ ಒಂದು ಕ್ಷಣ ಯೋಚಿಸಿ ಉತ್ತರಿಸಿದ ಪ್ರಸಾದ್, ಅಕ್ರಮವಾಗಿ ಗಳಿಸಿದ ಹಣದಿಂದ ನನ್ನ ತಂದೆ-ತಾಯಿಗಳ, ಪತ್ನಿ ಮತ್ತು ಮಕ್ಕಳ ಮುಖದಲ್ಲಿ ನಗು ತರಿಸಲು, ಅವರ ಪ್ರೀತಿ ಗಳಿಸಲು ಸಾಧ್ಯವಿಲ್ಲ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದರೆ ಅವರಿಗೆ ಖುಷಿಯಾಗುತ್ತದೆ.ಅಪರಾಧ ಜಗತ್ತು ನನ್ನ ಜೀವನದಲ್ಲಿ ಮುಗಿದ ಅಧ್ಯಾಯ, ಅದೊಂದು ಕೆಟ್ಟ ಕನಸು ಎಂದು ಭಾವಿಸಿ ಮುಂದಿನ ಸಂತೋಷದ ದಿನಗಳಿಗಾಗಿ ಹಾತೊರೆಯುತ್ತೇನೆ. ನನ್ನ ಇಬ್ಬರು ಗಂಡು ಮಕ್ಕಳು ನನ್ನಂತೆ ಆಗಬಾರದು, ಚೆನ್ನಾಗಿ ವಿದ್ಯಾಭ್ಯಾಸ ಹೊಂದಿ ಒಳ್ಳೆ ಪ್ರಜೆಗಳಾಗಿ ಜೀವನ ಸಾಗಿಸಬೇಕೆಂಬ ಆಸೆ ನನ್ನದು ಎಂದು ಉತ್ತರಿಸುತ್ತಾನೆ.

ಅಪರಾಧ ಲೋಕದಲ್ಲಿದ್ದು, ಪ್ರಾಮಾಣಿಕವಾಗಿ ಜೀವನದಲ್ಲಿ ಬದಲಾಗಬೇಕೆಂದು ಕೇಳಿಕೊಂಡು ಬಂದ ಇಂತಹ ನಾಲ್ವರು ಅಪರಾಧಿಗಳಿಗೆ ಸೈಬರಾಬಾದ್ ಪೊಲೀಸ್ ಪುನರ್ವಸತಿ ಕೇಂದ್ರದಿಂದ ಚಹಾ ಅಂಗಡಿ, ಉಪಹಾರ ಕೇಂದ್ರ ತೆರೆಯಲು ಸಹಾಯ ಮಾಡಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.

ಸಿನಿಮಾಕ್ಕೆ ವಿವರಿಸುವೆ: ನನ್ನ ಜೀವನ ವೃತ್ತಾಂತದ ಬಗ್ಗೆ ಯಾರಾದರೂ ಸಿನಿಮಾ ಮಾಡಲು ಮುಂದೆ ಬಂದರೆ ಅವರಿಗೆ ವಿವರವಾಗಿ ನನ್ನ ವೃತ್ತಾಂತವನ್ನು ಹೇಳಲು ಸಿದ್ಧ. ನನ್ನ ಜೀವನದ ಕಥೆ ಸಮಾಜಕ್ಕೆ ಗೊತ್ತಾಗಬೇಕು. ಒಬ್ಬ ಕ್ರೂರಿ ಹೇಗೆ ಮನುಷ್ಯನಾಗಿ ಬದಲಾಗಬಹುದು ಎಂಬುದು ನಾಲ್ಕು ಜನಕ್ಕೆ ತಿಳಿಯಬೇಕು ಎಂದು ಪ್ರಸಾದ್ ರೆಡ್ಡಿ ತನ್ನ ನಿಜ ಜೀವನದ ಕಥೆಗೆ ಇತಿಶ್ರೀ ಹಾಡುತ್ತಾನೆ.

Write A Comment