ನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಮತ್ತೊಂದು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.ಪ್ಯಾರಿಸ್ ಮೇಲೆ ಉಗ್ರರ ದಾಳಿ ಕುರಿತಾಗಿ ಉತ್ತರ ಪ್ರದೇಶ ಸಚಿವ ಸಮಾಜವಾದಿ ಮುಖಂಡ ಅಜಂ ಖಾನ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಾಕ್ಷಿ ಮಹಾರಾಜ್, ಆಜಂ ಖಾನ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಾರೆ ಎಂಬುದು ಅವರ ಮಾತಿಂದ ವೇದ್ಯವಾಗುತ್ತದೆ ಎಂದು ಹೇಳಿದ್ದಾರೆ.
‘ಟಿಪ್ಪು ಸುಲ್ತಾನ್ ಬಗ್ಗೆಯಾಗಲಿ, ಪ್ಯಾರಿಸ್ ಮೇಲಿನ ದಾಳಿಯಾಗಿರಲಿ, ಆಜಂ ಖಾನ್ ಸದಾ ಭಯೋತ್ಪಾದಕರಿಗೆ ಬೆಂಬಲ ನೀಡುವ ರೀತಿಯ ಹೇಳಿಕೆಗಳನ್ನು ಕೊಡುತ್ತಾರೆ. ಅವರ ಮಾತಿನಲ್ಲಿ ಅವರು ಉಗ್ರರನ್ನು ಬೆಂಬಲಿಸುತ್ತಿದ್ದಾರೆ’, ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ ಮಹಾರಾಜ್.
ಐಸಿಸ್ ಉಗ್ರರು ಪ್ಯಾರಿಸ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯಿಸಿದ್ದ ಯುಪಿ ಸಚಿವ ಆಜಂ ಖಾನ್, ‘ಪ್ಯಾರಿಸ್ ಮೇಲಿನ ಉಗ್ರರ ದಾಳಿ ಖಂಡನೀಯ. ಆದರೆ ಅಮೆರಿಕ ಮತ್ತು ರಷ್ಯಾ ದೇಶಗಳು ಅರಬ್ ದೇಶಗಳ ಮೇಲೆ ನಡೆಸುತ್ತಿರುವ ದಾಳಿ ಮತ್ತು ಇದರ ಪರಿಣಾಮವಾಗಿ ಅಮಾಯಕರ ಹತ್ಯೆಯಾಗುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಐಸಿಸ್ ಉಗ್ರರು ಈ ವಿಧ್ವಂಸಕಾರಿ ಕೃತ್ಯವನ್ನೆಸಗಿದ್ದಾರೆ’, ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ದೇಶಾದ್ಯಂತ ಭಾರಿ ಖಂಡನೆ ವ್ಯಕ್ತವಾಗುತ್ತಿದೆ.
ದೇಶಾದ್ಯಂತ ಕೋಲಾಹಲವನ್ನೆಬ್ಬಿಸಿರುವ ಅಸಹಿಷ್ಣುತೆ ಕುರಿತಾದ ಚರ್ಚೆಗೆ ಪ್ರತಿಕ್ರಿಯಿಸಿರುವ ಮಹಾರಾಜ್, ‘ವಿಶ್ವದಲ್ಲೇ ಭಾರತದಷ್ಟು ಸಹಿಷ್ಣು ದೇಶ ಬೇರೊಂದಿಲ್ಲ’, ಎಂದು ಹೇಳಿದ್ದಾರೆ.