ರಾಷ್ಟ್ರೀಯ

ಬಿಹಾರ ಚುನಾವಣಾ ಸೋಲು; ಮೋದಿ ವಿರುದ್ಧ ಆಕ್ರೋಶಗೊಂಡ ಅಡ್ವಾಣಿ ಬಳಗ !

Pinterest LinkedIn Tumblr

modi-advani

ನವದೆಹಲಿ: ಬಿಹಾರ ಮಹಾಪತನದ ನಂತರ ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಭಿನ್ನಾಭಿಪ್ರಾಯವು, ಸೋಲಿಗೆ ಸಾಮೂಹಿಕ ಹೊಣೆಹೊರುವ ಸಂಸದೀಯ ಮಂಡಳಿ ನಿರ್ಧಾರವನ್ನು ಪಕ್ಷದ ಹಿರಿಯ ವರಿಷ್ಠರು ಪ್ರಶ್ನಿಸುವದರೊಂದಿಗೆ ಮತ್ತೊಂದು ಮಜಲು ಮುಟ್ಟಿದೆ. ಸಾಮೂಹಿಕ ಹೊಣೆಹೊರುವ ತಂತ್ರವು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹತಾಶ ಪ್ರಯತ್ನವಾಗಿದೆ ಎಂದು ಹಿರಿಯ ನಾಯಕರಾದ ಲಾಲ್‍ಕಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ,ಯಶವಂತ ಸಿನ್ಹಾ ಮತ್ತು ಶಾಂತಕುಮಾರ್ ಟೀಕಿಸಿದ್ದಾರೆ. ಇದೇ ವೇಳೆ ಬಿಜೆಪಿ ಹಿರಿಯರು ಹಾಲಿ ನಾಯಕತ್ವ ನೀಡಿದ ಹೇಳಿಕೆಯಿಂದ ತೃಪ್ತಿಗೊಂಡಿಲ್ಲ.ಬದಲಾಗಿ ಖುದ್ದಾಗಿ ತಮ್ಮ ಜತೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದ್ದಾರೆಂದು `ಎನ್ ಡಿಟಿವಿ’ ವರದಿ ಮಾಡಿದೆ.

ಈ ಸಂಬಂಧ ಹೇಳಿಕೆ ನೀಡಿರುವ ವರಿಷ್ಠರು, ದೆಹಲಿ ವಿಧಾನಸಭಾ ಚುನಾವಣೆಯ ಸೋಲಿನಿಂದ ಪಾಠ ಕಲಿತಿಲ್ಲ. ಕೆಲವೇ ಕೆಲವರ ಹಿಡಿತದಲ್ಲಿ ಸಿಕ್ಕಿರುವ ಪಕ್ಷವು ಕಳೆದೊಂದು ವರ್ಷದಲ್ಲಿ ಸತ್ವಹೀನವಾಗಿದೆ ಎಂದು ಹೇಳಿದ್ದಾರೆ. 2014ರ ಲೋಕಸಭಾ ಚುನಾವಣೆ ಭರ್ಜರಿ ಗೆಲುವಿನ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ವಿರುದ್ಧದ ದನಿ ಪಕ್ಷದೊಳಗೆ ಅನುರಣಿಸಿದೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದ ಸದಸ್ಯ ಬೋಲಾ ಸಿಂಗ್, ಬಿಹಾರ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಧಾನಿ ನರೇಂದ್ರಮೋದಿಯೇ ನೇರ ಹೊಣೆ ಎಂದು ಬೊಟ್ಟು ಮಾಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ಮತ್ತು ಇತರ ನಾಯಕರು ಚುನಾವಣಾ ಪ್ರಚಾರದ ವೇಳೆ ಬಳಸಿದ ಅವಮರ್ಯಾದೆ ಭಾಷೆಯೇ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.ಈ ನಡುವೆ ಸೋಲಿಗೆ ಸಾಮೂಹಿಕ ಜವಾಬ್ದಾರಿ ಹೊರುವ ಸಂಸದೀಯ ಮಂಡಳಿ ನಿರ್ಧಾರವನ್ನು ಪಕ್ಷದ ಮೂವರು ಮಾಜಿ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ.

ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ (ಈ ಮೂವರು ಮೋದಿ ಸಂಪುಟದ ಪ್ರಮುಖ ಸಚಿವರು) ಅವರು, ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಶಾ ಅವರು ಪಕ್ಷದ ಸೋಲಿನ ಹೊಣೆ ಹೊರಬೇಕು ಎಂಬ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಸೋಲಿಗೆ ಸಾಮೂಹಿಕ ನಾಯಕತ್ವ ಹೊರುವುದು ಪಕ್ಷದ ಸತ್ಸಂಪ್ರದಾಯ ಎಂದು ಹೇಳಿದ್ದಾರೆ.

ಆಡ್ವಾಣಿ ಮತ್ತು ವಾಜಪೇಯಿ ಅವರಂತಹ ಹಿರಿಯ ನಾಯಕರನ್ನು ಹೊಂದಿರುವುದು ಪಕ್ಷದ ಸೌಭಾಗ್ಯ. ಅವರಿಬ್ಬರೂ ಪಕ್ಷದ ಸೋಲು-ಗೆಲವುಗಳನ್ನು ಸಾಮೂಹಿಕವಾಗಿ ಸ್ವೀಕರಿಸುವ ಆರೋಗ್ಯಕರ ಮಾದರಿಯನ್ನು ನಮ್ಮ ಮುಂದಿಟ್ಟಿದ್ದಾರೆ ಎಂದು ಹೇಳುವ ಮೂಲಕ ಆಡ್ವಾಣಿ ಅವರಿಗೆ ತಿರುಗೇಟು ನೀಡಿದ್ದಾರೆ. ಜತೆಗೆ ಹಿರಿಯರು ನೀಡುವ ಸಲಹೆ ಮತ್ತು ಮಾರ್ಗದರ್ಶನವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ. ಈಗಾಗಲೇ ಅರುಣ್ ಶೌರಿ,ಶತ್ರುಘ್ನ ಸಿನ್ಹಾ, ಆರ್.ಪಿ. ಸಿಂಗ್ ಅವರು ನಾಯಕತ್ವದ ವಿರುದ್ಧ ಎತ್ತಿರುವ ದನಿಗೆ ಹಿರಿಯರೂ ದನಿಗೂಡಿಸಿದಂತಾಗಿದೆ.

ಮೋದಿ ಮತ್ತು ಶಾ ಅವರು ತಂಡವು ಪಕ್ಷದೊಳಗಿನ ಸಹಮತದ ನಿರ್ಧಾರ ಕೈಗೊಳ್ಳುವ ಪದ್ಧತಿಯನ್ನು ನಾಶ ಮಾಡಿದ್ದಾರೆ. ದೆಹಲಿ ಚುನಾವಣೆಯ ಹೀನಾಯ ಸೋಲಿನಿಂದ ಯಾವ ಪಾಠವನ್ನೂ ಕಲಿತಿಲ್ಲ ಎಂದು ನೇರವಾಗಿ ಆಡ್ವಾಣಿ ಮತ್ತಿತರ ಹಿರಿಯರು ದಾಳಿ ನಡೆಸಿದ್ದಾರೆ.

ಬಿಹಾರದ ಚುನಾವಣಾ ಪ್ರಚಾರದ ಜವಾಬ್ದಾರಿ ಹೊತ್ತು ಸೋಲಿಗೆ ಕಾರಣರಾದವರೇ ಅದರ ಪರಾಮರ್ಶೆ ಮಾಡಬಾರದು. ಸೋಲಿಗೆ ಸಾಮೂಹಿಕ ಹೊಣೆಗಾರಿಕೆ ಹೊರುವುದೆಂದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವಕಾಶ ನೀಡಿದಂತೆಯೇ ಪಕ್ಷ ಗೆದ್ದಾಗ ಅದರ ಹೆಗ್ಗಳಿಕೆಯನ್ನು ಪಡೆದವರು ಸೋತಾಗಲೂ ಅದರ ಜವಾಬ್ದಾರಿಯನ್ನು ಹೊರಬೇಕು. ಬಿಹಾರದ ಹೀನಾಯ ಸೋಲಿಗೆ ಪ್ರಮುಖ ಕಾರಣವೆಂದರೆ ಕಳೆದೊಂದು ವರ್ಷದಲ್ಲಿ ಕೆಲವೇ ಕೆಲವರು ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡು ಸತ್ವಹೀನಗೊಳಿಸಿರುವುದು. ಈ ಟೀಕೆಗಳನ್ನು ಅಸಂತೃಪ್ತ ನಾಯಕರ ಕೈವಾಡ ಎಂದು ತಳ್ಳಿಹಾಕಬೇಡಿ ಎಂದು ಹೇಳಿದ್ದಾರೆ.

ಬೋಲಾ ಸಿಂಗ್ ಹೇಳಿದ್ದೇನು?: ಬಿಜೆಪಿ ನಾಯಕರು ಅವಮರ್ಯಾದೆ ಭಾಷೆ ಬಳಕೆ ಮಾಡಿ ಆತ್ಮಹತ್ಯೆಯ ಹಾದಿ ಹಿಡಿದರು. ಮೋದಿ ಅವರಿಂದ ಕೆಳಹಂತದ ನಾಯಕರವರೆಗೆ ಎಲ್ಲರೂ ಸಭಾ ಸಂಹಿತೆ ಮೀರಿದ್ದಾರೆ. ಹಾಗೆ ಹಾದಿ ತಪ್ಪಿದ್ದರಿಂದಾಗಿ ನಾವು ಸೋಲುವುದು ಅನಿವಾರ್ಯವಾಯಿತು ಎಂದು ಬೋಲಾ ಸಿಂಗ್ ಹೇಳಿದ್ದಾರೆ. ಲಾಲು ಪ್ರಸಾದ್ ಅವರ ಪುತ್ರಿ ಕುರಿತು ಮೋದಿ ಹೇಳಿಕೆಯು ಚುನಾವಣಾ ಆಯೋಗದ ಕನಿಷ್ಠ ನೀತಿ ಸಂಹಿತೆ ಮೀರಿದ್ದಾಗಿತ್ತು.

ಮೋದಿ ಮತ್ತು ಶಾ ಅವರು ಗೋಮಾಂಸ, ಪಾಕಿಸ್ತಾನ ಮತ್ತು ನಿತೀಶ್ ತಾಂತ್ರಿಕನನ್ನು ಭೇಟಿ ಮಾಡಿದ ವಿಡಿಯೋ ವಿಷಯ ಪ್ರಚಾರಕ್ಕೆಳೆದಿದ್ದು ಅತಿ ದೊಡ್ಡ ಪ್ರಮಾದ. ಉದ್ಯೋಗ ಮತ್ತು ಅಭಿವೃದ್ಧಿಯತ್ತ ಗಮನ ಹರಿಸದೇ ಗೋಮಾಂಸ ಮತ್ತು ಪಾಕಿಸ್ತಾನವನ್ನು ಎಳೆದು ತಂದರು. ಮೋಹನ್ ಭಾಗವತ್‍ರ ಮೀಸಲಾತಿ ಹೇಳಿಕೆ ಅಕಾಲಿಕವಾಗಿತ್ತು ಎಂದಿದ್ದಾರೆ.

Write A Comment