ರಾಷ್ಟ್ರೀಯ

ಗಿರೀಶ್ ಕಾರ್ನಾಡ್ ಗೆ ಇತಿಹಾಸವೇ ಗೊತ್ತಿಲ್ಲ: ಎಚ್ ಡಿ ಕುಮಾರಸ್ವಾಮಿ

Pinterest LinkedIn Tumblr

HDK_KARNAD

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಸ್ವಾತಂತ್ರ್ಯ ಸೇನಾನಿ ಅಲ್ಲ ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಹೇಳಿಕೆ ನೀಡಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಇತಿಹಾಸ ತಿಳಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ನಾಡ್ ಅವರು ಯಾವ ಕಾರಣಕ್ಕಾಗಿ ಈ ರೀತಿ ಕೆಂಪೇಗೌಡರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕಳೆದ 500 ವರ್ಷಗಳ ಹಿಂದೆ ಕೆಂಪೇಗೌಡರು ಆಳ್ವಿಕೆ ನಡೆಸುತ್ತಿದ್ದರು. ಆದರೆ, ಆಗ ಬ್ರಿಟಿಷರೇ ಬಂದಿರಲಿಲ್ಲ. ಈ ತಿಳುವಳಿಕೆಯೂ ಕಾರ್ನಾಡ್ ಅವರಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಿನ್ನೆ ನಡೆದ ಸರ್ಕಾರದ ಅಧಿಕೃತ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಿರೀಶ್‌ಕಾರ್ನಾಡ್ ಅವರು ಕೆಂಪೇಗೌಡರು ಸ್ವಾತಂತ್ರ್ಯ ಸೇನಾನಿ ಅಲ್ಲ ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯಾದ್ಯಂತ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಕಾರ್ನಾಡ್ ಅವರ ಈ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದು, ಕಾರ್ನಾಡ್ ಅವರ ಕ್ಷಮೆಯಾಚನೆ ಅವರ ಹೇಳಿಕೆಗೆ ಪ್ರಾಯಶ್ಚಿತವಾಗಿಲ್ಲ. ಕಾರ್ನಾಡ್ ನಿಜವಾದ ಸಾಹಿತಿಯಲ್ಲ. ಸರ್ಕಾರದ ಹೊಗಳಿಕೆಯ ಸಾಹಿತಿಯಾಗಿದ್ದಾರೆ. ಸಾಹಿತಿ ಕಾರ್ನಾಡ್ ಅವರ ಹೇಳಿಕೆಯನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಕಾರ್ನಾಡ್ ಈ ರೀತಿ ಹೇಳಿಕೆ ನೀಡುತ್ತಿದ್ದಂತೆ, ಸಿದ್ದರಾಮಯ್ಯನವರು ಸ್ಥಳದಲ್ಲೇ ಉತ್ತರ ನೀಡಿದ್ದರೆ ಮಡಿಕೇರಿಯಲ್ಲಿ ಮತ್ತು ರಾಜ್ಯಾದ್ಯಂತ ಇಂತಹ ಗಲಭೆಗಳು ಸೃಷ್ಟಿಯಾಗುತ್ತಿರಲಿಲ್ಲ. ಆದರೆ, ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಇಂತಹ ಹೇಳಿಕೆಗಳು ಸಮಾಜ ಹೊಡೆಯುವ ಮತ್ತು ರಾಜ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಹುಟ್ಟಿಹಾಕುವ ಹೇಳಿಕೆಗಳಾಗಿವೆ ಎಂದು ಆರೋಪಿಸಿದ್ದಾರೆ.

Write A Comment