ರಾಷ್ಟ್ರೀಯ

ಜಮ್ಮು-ಕಾಶ್ಮೀರಕ್ಕೆ 80,000 ಕೋ.ರೂ. ಪ್ಯಾಕೇಜ್: ಮೋದಿ ಘೋಷಣೆ

Pinterest LinkedIn Tumblr

Modiii___

ಶ್ರೀನಗರ, ನ.7: ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಬೆಳವಣಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ 80,000 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಿಸಿದ್ದಾರೆ ಹಾಗೂ ಇದು ಕೇವಲ ಆರಂಭ ಮಾತ್ರ ಎಂದು ಹೇಳಿದ್ದಾರೆ.
‘‘80,000 ಕೋಟಿ ರೂ. ಪ್ಯಾಕೇಜನ್ನು ಮಿತಿ ಎಂದು ಭಾವಿಸಬೇಡಿ. ಇದು ಕೇವಲ ಆರಂಭ ಮಾತ್ರ. ಹಣಕ್ಕೇನೂ ಕೊರತೆಯಿಲ್ಲ. ನಮ್ಮ ಖಜಾನೆ ಮಾತ್ರವಲ್ಲ, ನಮ್ಮ ಹೃದಯವೂ ನಿಮಗಾಗಿ ಮಿಡಿಯುತ್ತಿದೆ’’ ಎಂದು ಶ್ರೀನಗರದ ಶೇರ್-ಇ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಧಾನಿ ಹೇಳಿದರು.
ಅಲ್ಲಿ ಸೇರಿದ್ದ ಸಭಿಕರು ಕಿವಿಗಡಚಿಕ್ಕುವ ಚಪ್ಪಾಳೆ ಮೂಲಕ ಪ್ರಧಾನಿಯ ಮಾತುಗಳನ್ನು ಸ್ವಾಗತಿಸಿದರು.
ಈ ವರ್ಷದ ಮಾರ್ಚ್ 1ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶ್ರೀನಗರಕ್ಕೆ ಮೊದಲ ಭೇಟಿ ನೀಡಿದ ಮೋದಿ, ಕಾಶ್ಮೀರವನ್ನು ಪ್ರವಾಸಿಗರ ಕನಸಿನ ಸ್ಥಳವನ್ನಾಗಿ ಮಾಡಲು ತಾನು ಬಯಸಿರುವುದಾಗಿ ಹೇಳಿದರು.
‘‘ಹಿಂದೆ ಜನರಲ್ಲಿ ಹೆಚ್ಚು ಹಣವಿದ್ದಾಗ ಕಾಶ್ಮೀರಕ್ಕೆ ಹೋಗಲು ಬಯಸುತ್ತಿದ್ದರು. ಆ ವೈಭವದ ದಿನಗಳನ್ನು ಮರಳಿ ತರಲು ನಾನು ಬಯಸಿದ್ದೇನೆ’’ ಎಂದರು.
ಭಾರತೀಯ ಕ್ರಿಕೆಟ್‌ನಲ್ಲಿ ಕಾಶ್ಮೀರದ ಪಾತ್ರವನ್ನೂ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ‘‘ಸಚಿನ್, ಸೆಹವಾಗ್ ಅಥವಾ ಧೋನಿ, ಯಾರೇ ಸಿಕ್ಸ್ ಬಾರಿಸಲಿ, ಅವರು ಮೇಡ್ ಇನ್ ಕಾಶ್ಮೀರ್ ಬ್ಯಾಟ್‌ನಿಂದ ಅದನ್ನು ಬಾರಿಸುತ್ತಿದ್ದರು’’ ಎಂದರು. ಪ್ರಧಾನಿಯನ್ನು ಹೊತ್ತ ವಿಶೇಷ ವಿಮಾನವೊಂದು ಶ್ರೀನಗರ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಸುಮಾರು 11:20ಕ್ಕೆ ಇಳಿಯಿತು.
ಅಲ್ಲಿಂದ ಬದಾಮಿ ಬಾಗ್ ಕಂಟೋನ್ಮಂಟ್ ಹೆಲಿಪ್ಯಾಡ್‌ಗೆ ಮೋದಿ ಸೇನಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರು. ಅಲ್ಲಿಂದ ವಿಶೇಷ ವಾಹನಗಳ ಸಾಲಿನಲ್ಲಿ ಶೇರ್-ಇ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂ ತಲುಪಿದರು.

ಮೋದಿ ಹೇಳಿದ್ದು…
ಆಧುನಿಕ, ಸಮೃದ್ಧ ಮತ್ತು ಪ್ರಗತಿಪರವಾಗಿರುವ ನೂತನ ಜಮ್ಮು ಮತ್ತು ಕಾಶ್ಮೀರವನ್ನಾಗಿ ರಾಜ್ಯವನ್ನು ಪರಿವರ್ತಿಸಲು ಈ ಹಣವನ್ನು ಬಳಸಬೇಕು ಎನ್ನುವುದು ನನ್ನ ಹೃದಯದ ಬಯಕೆಯಾಗಿದೆ.
‘‘ಕಾಶ್ಮೀರಿಯತ್ ಇಲ್ಲದೆ ಭಾರತ ಅಪೂರ್ಣ’’ ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಪ್ರಧಾನಿ ನೆನಪಿಸಿದರು.
ಇದೇ ನೆಲದಿಂದ ಸೂಫಿ ಪರಂಪರೆ ಆರಂಭವಾಗಿತ್ತು ಹಾಗೂ ಈ ಪರಂಪರೆ ನಮಗೆ ಏಕತೆ ಮತ್ತು ಒಗ್ಗಟ್ಟಿನ ಬಲವನ್ನು ಕಲಿಸಿದೆ.
ಶಿಕ್ಷಣವನ್ನು ಸುಧಾರಿಸುವ ಮೂಲಕ ಹಾಗೂ ಪ್ರವಾಸೋದ್ಯಮ ಸೇರಿದಂತೆ ಉದ್ದಿಮೆಗಳಿಗೆ ಉತ್ತೇಜನ ನೀಡುವ ಮೂಲಕ ಕಾಶ್ಮೀರಿ ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ಮೋದಿ ನೀಡಿದರು.
ಸಾರ್ವಜನಿಕ ಸಭೆಯ ಬಳಿಕ ಮೋದಿ ಬಗ್ಲಿಹಾರ್ ಜಲ ವಿದ್ಯುತ್ ಯೋಜನೆಯ ಎರಡನೆ ಹಂತವನ್ನು ಉದ್ಘಾಟಿಸಿದರು.

ಇಲ್ಲಿ ಅಂತಾರಾಷ್ಟ್ರೀಯ ಪಂದ್ಯ ಯಾಕೆ ನಡೆಯಬಾರದು?
ಶ್ರೀನಗರ, ನ. 7: ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಕಣಿವೆಯಲ್ಲಿ ಶನಿವಾರ ನಡೆಸಿದ ರ್ಯಾಲಿಯ ವೇಳೆ ಕಾಶ್ಮೀರಿ ಕ್ರಿಕೆಟಿಗ ಪರ್ವೇಝ್ ರಸೂಲ್‌ರನ್ನು ವಿಶೇಷವಾಗಿ ಪ್ರಸ್ತಾಪಿಸಿದರು ಹಾಗೂ ತಾನು ಮಾತನಾಡುತ್ತಿರುವ ಶೇರ್-ಇ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದನ್ನು ಯಾಕೆ ಆಯೋಜಿಸಬಾರದು ಎಂದು ಪ್ರಶ್ನಿಸಿದರು.
ರಾಜ್ಯದ ಯುವಕರನ್ನು ಶ್ಲಾಘಿಸಿದ ಪ್ರಧಾನಿ, ರಸೂಲ್ ಬಗ್ಗೆ ಮಾತನಾಡಿದರು. ‘‘ಕಾಶ್ಮೀರದ ಈ ಹುಡುಗ ಕ್ರಿಕೆಟ್ ಕ್ಷೇತ್ರದಲ್ಲಿ ಹೆಸರು ಗಳಿಸುತ್ತಿದ್ದಾರೆ’’ ಎಂದು ಹೇಳಿದರು.
‘‘ಕಳೆದ 30 ವರ್ಷಗಳಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯ ಈ ಸ್ಟೇಡಿಯಂನಲ್ಲಿ ನಡೆದಿಲ್ಲ… ಈ ಸ್ಟೇಡಿಯಂನಲ್ಲಿ ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳು ಯಾಕೆ ನಡೆಯಬಾರದು?’’ ಎಂದು ಅವರು ಪ್ರಶ್ನಿಸಿದರು. 1983ರಲ್ಲಿ ಸ್ಥಾಪನೆಯಾದ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಅದೇ ವರ್ಷದ ಅಕ್ಟೋಬರ್‌ನಲ್ಲಿ ನಡೆದಿತ್ತು ಹಾಗೂ ಕೊನೆಯ ಪಂದ್ಯ 1986 ಸೆಪ್ಟಂಬರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆದಿತ್ತು.

ಮೋದಿ ಕಾಶ್ಮೀರ ಭೇಟಿ: ಇಂಟರ್ನೆಟ್ ಸ್ತಬ್ಧ
ಇಂದಿನ ಪ್ರಧಾನಿ ಸಭೆಯನ್ನು ಹಾಳುಗೆಡಹುವ ಬೆದರಿಕೆಯನ್ನು ಕೆಲವು ಪ್ರತ್ಯೇಕತಾವಾದಿ ನಾಯಕರು ಒಡ್ಡಿದ್ದರು. ಈ ಬೆದರಿ ಕೆಯ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಸ್ತಬ್ಧಗೊಳಿಸಲಾಗಿತ್ತು.
ನಿನ್ನೆ ಹಲವು ಪ್ರತ್ಯೇಕತಾವಾದಿ ನಾಯಕರನ್ನು ಪ್ರತಿಬಂಧಕ ಬಂಧನಕ್ಕೆ ಗುರಿಪಡಿಸಲಾಗಿತ್ತು ಹಾಗೂ ಇನ್ನು ಹಲವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. 300ಕ್ಕೂ ಅಧಿಕ ಪ್ರತ್ಯೇಕತಾವಾದಿ ಕಾರ್ಯಕರ್ತರನ್ನೂ ಬಂಧಿಸಲಾಗಿತ್ತು. ವದಂತಿಗಳು ಹಬ್ಬುವುದನ್ನು ತಡೆಗಟ್ಟುವುದಕ್ಕಾಗಿ ಬೃಹತ್ ಆನ್‌ಲೈನ್ ಕಾರ್ಯಾಚರಣೆ ನಡೆಸಿದ ಸರಕಾರ, 50ಕ್ಕೂ ಅಧಿಕ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಪುಟಗಳನ್ನು ಸ್ಥಗಿತಗೊಳಿಸಿತು.

‘ಹಣದಲ್ಲಿ ಅಳೆಯುವ ಮೋದಿ’
ಈ ಘೋಷಣೆಯ ಸ್ವಲ್ಪವೇ ಹೊತ್ತಿನ ಬಳಿಕ ಟ್ವೀಟ್ ಮಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ‘‘ಕಾಶ್ಮೀರ ವಿವಾದವನ್ನು ರೂಪಾಯಿ ಮತ್ತು ಪೈಸೆಯಲ್ಲಿ ಅಳೆಯುವ ಅದೇ ತಪ್ಪನ್ನು ಪ್ರಧಾನಿ ಮೋದಿ ಪುನರಾವರ್ತಿಸಿದ್ದಾರೆ’’ ಎಂದಿದ್ದಾರೆ.

Write A Comment