ಅಂತರಾಷ್ಟ್ರೀಯ

ಭಾರತದಲ್ಲಿ ವಿವಿಧ ಕಡೆ ಕೋಮು ಗಲಭೆ ಸೃಷ್ಟಿಗೆ ಐಎಸ್ಐ ಸಂಚು! ಏನಿದು ಸಂಚು…ಇಲ್ಲಿದೆ ಓದಿ…

Pinterest LinkedIn Tumblr

clash

ನವದೆಹಲಿ: ಭಾರತದ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ಸಂಘರ್ಷ ಸೃಷ್ಟಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸಂಚು ರೂಪಿಸಿದ್ದು, ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಜೊತೆ ಸೇರಿ ಕುಕೃತ್ಯ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇದಕ್ಕಾಗಿ ಈ ಹಿಂದೆ ಭಾರತದಿಂದ ನಾಪತ್ತೆಯಾಗಿದ್ದ ಯುವಕರನ್ನು ಬಳಸಿಕೊಳ್ಳಲು ಐಎಸ್ಐ ನಿರ್ಧರಿಸಿದ್ದು, ಬಹುಶಃ ಈ ಎಲ್ಲ ಯುವಕರು ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಗೆ ಸೇರಿರುವ ಉಗ್ರರಾಗಿರಬಹುದು ಎಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಸೂಕ್ಷ್ಮ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್, ಉತ್ತರ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಸಂಘರ್ಷ ಸೃಷ್ಟಿಗೆ ಐಎಸ್ಐ ಸಂಚು ರೂಪಿಸಿದೆ. ಪ್ರಸ್ತುತ ಭಾರತದಲ್ಲಿ ವಿವಾದಕ್ಕೆ ಕಾರಣವಾಗಿರುವ ಅಸಹಿಷ್ಣುತೆ ಮತ್ತು ಘರ್ ವಾಪ್ಸಿ ಯಂತಹ ವಿಚಾರದ ಬಿಸಿಯಲ್ಲಿಯೇ ಕೋಮು ಸಂಘರ್ಷ ಸೃಷ್ಟಿ ಮಾಡಿ ಅಪಾರ ಪ್ರಮಾಣದ ಸಾವು-ನೋವುಗಳನ್ನು ಉಂಟುಮಾಡುವುದು ಐಎಸ್ಐ ಸಂಚಾಗಿದೆ. ಇದಕ್ಕಾಗಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸ್ಲೀಪರ್ ಸೆಲ್ ಸದಸ್ಯರನ್ನು ಅದು ಬಳಸಿಕೊಳ್ಳುತ್ತಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಈ ಹಿಂದೆಯೂ ಕೂಡ ಅಸ್ಸಾಂನಲ್ಲಿ ಐಎಸ್ಐ ಇಂತುಹುದೇ ತಂತ್ರವೊಂದನ್ನು ಹೂಡಿತ್ತು. ಇದೇ ರೀತಿಯ ಸ್ಲೀಪರ್ ಸೆಲ್ ಸದಸ್ಯರನ್ನು ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ದ ಅಶ್ಲೀಲ ಬರವಣಿಗೆಗಳನ್ನು ರವಾನಿಸುವ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿತ್ತು. ಅಸ್ಸಾಂ ಮಾತ್ರವಲ್ಲದೇ ಕರ್ನಾಟಕದ ಬೆಂಗಳೂರಿನಲ್ಲಿಯೂ ಇಂಡಿಯನ್ ಮುಜಾಹಿದ್ದೀನ್ ಸದಸ್ಯರು ಈಶಾನ್ಯ ಭಾರತದ ನಿವಾಸಿಗಳ ವಿರುದ್ಧ ಆಕ್ಷೇಪಣಾರ್ಹ ಬರವಣಿಗೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಮೊಬೈಲ್ ಗಳಲ್ಲಿ ರವಾನೆ ಮಾಡುವ ಮೂಲಕ ಸಂಘರ್ಷಕ್ಕೆ ಕಾರಣರಾಗಿದ್ದರು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಸೇರಿದಂತೆ ಪ್ರಮುಖರು ಸ್ಲೀಪರ್ ಸೆಲ್ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇವರಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ನೆರವು ನೀಡುತ್ತಿದೆ. ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್ ಮತ್ತು ವಾಟ್ಸ್ ಅಪ್ ಗಳಲ್ಲಿ ಆಕ್ಷೇಪಾರ್ಹ ಬರವಣಿಗೆಗಳನ್ನು ಹಾಕಿ ಅಥವಾ ವಿವಾದಾಸ್ಪದ ಚರ್ಚೆಗಳನ್ನು ನಡೆಸುವ ಮೂಲಕ ಕೋಮು ಸಂಘರ್ಷಕ್ಕೆ ದಾರಿ ಮಾಡುವುದೇ ಇವರ ಉದ್ದೇಶವಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಹೀಗಾಗಿ ಈ ಬಗ್ಗೆ ದೇಶದ ಎಲ್ಲ ರಾಜ್ಯಗಳ ಡಿಜಿಪಿ-ಐಜಿಪಿ ಶ್ರೇಣಿಯ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

Write A Comment