ರಾಷ್ಟ್ರೀಯ

ಸೆರೆಸಿಕ್ಕ ಭೂಗತ ಪಾತಕಿ ಛೋಟ ರಾಜನ್ ಪ್ರತಿಜ್ಞೆ ….! ಪ್ರತಿಜ್ಞೆ ಏನು ಗೊತ್ತೇ..?

Pinterest LinkedIn Tumblr

rajan

ನವದೆಹಲಿ, ನ.6: ನಾನು ಜೈಲಿನಲ್ಲಿ ಇರಲಿ, ಇಲ್ಲವೆ ಹೊರಗೇ ಇರಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ಧ ನನ್ನ ಜೀವನದ ಕೊನೆ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ. ಇದು ಇಂಡೋನೇಷಿಯಾದ ರಾಜಧಾನಿ ಬಾಲಿಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ಛೋಟ ರಾಜನ್ ಮಾಡಿರುವ ಪ್ರತಿಜ್ಞೆ. ನನಗೆ ನನ್ನ ತಾಯ್ನಾಡಿಗೆ ಹಿಂದಿರುಗುವುದಕ್ಕೆ ಅತ್ಯಂತ ಸಂತಸವಾಗುತ್ತದೆ. ಕಳೆದ 27 ವರ್ಷಗಳಿಂದ ನಾನು ಮಾಡದ ತಪ್ಪಿಗಾಗಿ ತಲೆಮರೆಸಿಕೊಂಡಿದ್ದೆ. ಈಗ ಅತ್ಯಂತ ಸಂತೋಷದಿಂದ ಸ್ವದೇಶಕ್ಕೆ ಹೋಗುತ್ತಿದ್ದೇನೆ ಎಂದು ಛೋಟ ರಾಜನ್ ಮಾಧ್ಯಮಗಳಿಗೆ ಬಾಲಿಯಿಂದ ದೆಹಲಿಗೆ ಹೊರಡು ಮುನ್ನ ಹೇಳಿದ್ದಾನೆ.

ನನಗೆ ದಾವೂದ್ ಇಬ್ರಾಹಿಂನಿಂದ ಪ್ರಾಣ ಬೆದರಿಕೆ ಎಂಬುದು ಕೇವಲ ವದಂತಿ. ಒಂದು ವೇಳೆ ಆತನ ಗ್ಯಾಂಗ್‌ನಿಂದ ಬೆದರಿಕೆ ಇದ್ದರೆ ಅದನ್ನು ಎದುರಿಸಲು ನಾನು ಕೂಡ ಸಿದ್ಧನಿದ್ದೇನೆ. ನಾನು ಎಲ್ಲೇ ಇರಲಿ, ಹೇಗೇ ಇರಲಿ ಜೈಲಿನಲ್ಲಿದ್ದರೂ ಸರಿಯೆ ಇಲ್ಲವೆ ಹೊರಗಿದ್ದರೂ ಸರಿಯೇ ನನ್ನ ಕೊನೆ ಉಸಿರು ಇರುವವರೆಗೂ ದಾವೂದ್ ವಿರುದ್ಧ ಹೋರಾಟ ಮುಂದುವರೆಯುತ್ತದೆ ಎಂದು ಛೋಟ ರಾಜನ್ ಗುಡುಗಿದ್ದಾನೆ.

ನಾನು ಯಾವ ತಪ್ಪುಗಳನ್ನೂ ಮಾಡಿರಲಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಅನಗತ್ಯವಾಗಿ ನನ್ನನ್ನು ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಸೇರಿದಂತೆ ಮತ್ತಿತರರು ನನ್ನ ಹೆಸರು ಎಳೆತಂದಿದ್ದಾರೆ. ನನ್ನ ಮೇಲಿರುವ ಎಲ್ಲ ಪ್ರಕರಣಗಳನ್ನೂ ಕಾನೂನಿನ ಮೂಲಕ ಹೋರಾಟ ಮಾಡುತ್ತೇನೆ. ಮುಂಬೈಗೆ ನಾನು ಹೋಗುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಿಬಿಐ ಅಧಿಕಾರಿಗಳು ನನ್ನ ಮೇಲಿರುವ ಪ್ರಕರಣಗಳಿಗೆ ವಿಚಾರಣೆ ನಡೆಸಲು ದೆಹಲಿಗೆ ಕರೆದೊಯ್ಯುತ್ತಿದ್ದಾರೆ. ಎಲ್ಲಿಗೆ ಹೋದರೂ ನಾನು ಕಾನೂನು ಪ್ರಕಾರವೇ ಹೋರಾಟ ಮುಂದುವರೆಸುತ್ತೇನೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಛೋಟ ರಾಜನ್ ಪ್ರತಿಜ್ಞೆ ಮಾಡಿದ್ದಾನೆ.

Write A Comment