ರಾಷ್ಟ್ರೀಯ

ಕಾಂಗ್ರೆಸ್ ನ ಮಾಜಿ ಸಂಸದನ ಸೊಸೆ, ಮೊಮ್ಮಕ್ಕಳ ಸಜೀವ ದಹನ

Pinterest LinkedIn Tumblr

warangal

ಹೈದರಾಬಾದ್,ನ.4: ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಎಸ್.ರಾಜಯ್ಯ ಅವರ ಸೊಸೆ ಹಾಗೂ ಮೂವರು ಮೊಮ್ಮಕ್ಕಳು ಸಜೀವವಾಗಿ ಬೆಂದು ಹೋದ ಘಟನೆ ನಡೆದಿದೆ.

ರಾಜಯ್ಯನವರ ಸೊಸೆ ಸಾರಿಕಾ ಹಾಗೂ ಮೂವರು ಮೊಮ್ಮಕ್ಕಳು(ಎಲ್ಲ ಗಂಡು ಮಕ್ಕಳು) ಈ ಆಕಸ್ಮಿಕ ಬೆಂಕಿಯಲ್ಲಿ ಸಜೀವವಾಗಿ ದಹನಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ದುರಂತಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಅಡಿಗೆ ಅನಿಲ ಸಿಲಿಂಡರ್ ಸಿಡಿದಿರಬಹುದು ಎಂದು ಶಂಕಿಸಲಾಗಿದೆ. ವಾರಂಗಲ್ ನಗರದ ಹನುಮಕೊಂಡ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ನ.21ರಂದು ನಡೆಯಲಿರುವ ವಾರಂಗಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ರಾಜಯ್ಯ ಸಿದ್ಧತೆ ನಡೆಸಿದ್ದರು. ಅವರ ಸೊಸೆ 2014ರಲ್ಲಿ ನೀಡಿದ್ದ ದೌರ್ಜನ್ಯ ಆರೋಪದಡಿ ರಾಜಯ್ಯ ಅವರ ಪತ್ನಿ , ಮಗ ಹಾಗೂ ಮತ್ತೊಬ್ಬಳು ಮಹಿಳೆ ವಿರುದ್ಧ ಪೊಲೀಸರು ಬೇಗಂಪೇಟ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಸೊಸೆ ಮತ್ತು ಮೊಮ್ಮಕ್ಕಳ ಈ ಸಜೀವ ದಹನದ ಕುರಿತಂತೆ ಮಾಜಿ ಸಂಸದ ರಾಜಯ್ಯ ಮತ್ತು ಅವರ ಪತ್ನಿ , ಮಗನ ಮೇಲೆಯೇ ಅನುಮಾನ ಶುರುವಾಗಿದ್ದು , ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಈ ದುರ್ಘಟನೆ ಕುರಿತಾದ ಸತ್ಯಾಸತ್ಯತೆಗಳು ಬಹಿರಂಗವಾಗಲಿವೆ ಎಂದು ಹೇಳಲಾಗಿದೆ.

Write A Comment