ತಿರುವನಂತಪುರಂ: ಶಾಂತಿಯ ತವರೂರಾಗಿದ್ದ ಭಾರತ ದೇಶ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ಅಂಟೋನಿ ಹೇಳಿದ್ದಾರೆ.
ಶಾಂತಿಯ ನೆಲೆವೀಡಾಗಿ ಇತರ ದೇಶಗಳಿಗೆ ಮಾದರಿಯಾಗಿದ್ದ ಭಾರತ, ಇದೀಗ ಕಠಿಣವಾದ ಪರಿಸ್ಥಿತಿ ಎದುರಿಸುತ್ತಿದೆ. ಯಾವ ಮಟ್ಟಿಗೆ ಪರಿಸ್ಥಿತಿ ಕೆಟ್ಟಿದೆ ಎಂದರೆ, ಯಾರು ಏನನ್ನು ತಿನ್ನಬೇಕು, ಯಾರು ಯಾವುದನ್ನು ತೊಡಬೇಕು, ಯಾರು ಯಾವ ರೀತಿಯ ಸಾಹಿತ್ಯವನ್ನು ಬರೆಯಬೇಕು ಎನ್ನುವ ನಿರ್ಧಾರ ಬಿಜೆಪಿ ಮತ್ತು ಆರೆಸ್ಸೆಸ್,ಸಂಘ ಪರಿವಾರದ ಸುರ್ಪದಿಗೆ ಒಳಪಟ್ಟಿದೆ ಎಂದು ಲೇವಡಿ ಮಾಡಿದರು.
ದೇಶದ ಕೃಷಿ ಕ್ಷೇತ್ರ ತೊಂದರೆಯಲ್ಲಿದೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೇಶದಲ್ಲಿ ವಿದೇಶಿ ಹೂಡಿಕೆಗಳ ಕೊರತೆ ಎದುರಾಗಿದೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮುಸ್ಲಿಮರು ಮತ್ತು ದಲಿತರ ಮೇಲೆ ಮುಜಾಫರ್‌ನಗರ್, ಮಹಾರಾಷ್ಟ್ರ ಮತ್ತು ಹರಿಯಣಾ ರಾಜ್ಯಗಳಲ್ಲಿ ಹಲ್ಲೆಗಳಾಗುತ್ತಿವೆ. ಗೋಮಾಂಸ ಸೇವನೆ ನೆಪದಲ್ಲಿ ಹತ್ಯೆಗಳಾಗುತ್ತಿವೆ ಎಂದು ಕಿಡಿಕಾರಿದರು.
ಇದೀಗ ಮಹಾತ್ಮಾ ಗಾಂಧಿ ಮತ್ತು ನೆಹರು ಅಂತಹವರಿಗೆ ಸ್ಥಾನವಿಲ್ಲ. ಆರೆಸ್ಸೆಸ್ ಪ್ರತಿಯೊಂದನ್ನು ನಿರ್ಧರಿಸುತ್ತದೆ. ಮಹಾತ್ಮ ಗಾಂಧಿಯ ಹತ್ಯೆ ದಿನವನ್ನು ಬಲಿದಾನ್ ದಿವಸ್ ಆಚರಿಸುವಂತೆ ಹಿಂದು ಮಹಾಸಭಾ ನೀಡಿದ ಕರೆಯನ್ನು ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟೋನಿ ತೀವ್ರವಾಗಿ ಖಂಡಿಸಿದರು.