ರಾಷ್ಟ್ರೀಯ

ಮಾಹಿತಿ ಪಡೆದ ನಂತರವಷ್ಟೇ ಅಮಿತ್ ಮಿಶ್ರಾ ವಿರುದ್ಧ ಕ್ರಮ: ರಾಜೀವ್ ಶುಕ್ಲಾ

Pinterest LinkedIn Tumblr

Rajeev-Shuklaನವದೆಹಲಿ: ಅಮಿತ್ ಮಿಶ್ರಾ ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿಗಾಗಿ ಬಿಸಿಸಿಐ ಎದುರು ನೋಡುತ್ತಿದ್ದು, ಮಾಹಿತಿ ಬಂದ ನಂತರವಷ್ಟೇ ಅಮಿತ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಹಿರಿಯ ಅಧಿಕಾರಿ ಹಾಗೂ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರು ಮಂಗಳವಾರ ಹೇಳಿದ್ದಾರೆ.

ಬಾಲಿವುಡ್ ಚಿತ್ರ ನಿರ್ಮಾಪಕಿ ಹಾಗೂ ಗೆಳತಿ ವಂದನಾ ಜೈನ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದ ಕ್ರಿಕೆಟಿಗ ಅಮಿತ್ ಮಿಶ್ರಾ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಸಂಬಂಧ ಬಿಸಿಸಿಐಗೆ ಈಗಾಗಲೇ ಮಾಹಿತಿ ತಿಳಿದಿದೆ. ಆದರೆ, ಪ್ರಕರಣ ಸಂಬಂಧ ಮಾಹಿತಿಯನ್ನು ಕಲೆಹಾಕಲು ಬಿಸಿಸಿಐ ಪ್ರಯತ್ನ ಮಾಡುತ್ತಿದೆ. ಮಾಹಿತಿ ದೊರೆತ ಕೂಡಲೇ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬುದರ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪೊಲೀಸರು ಇದೀಗ ಅವರ ಕೆಲಸ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ನಿಜಕ್ಕೂ ಅಮಿತ್ ಮಿಶ್ರಾ ಆರೋಪಿಯೇ ಎಂಬುದರ ಕುರಿತಂತೆ ತನಿಖೆ ನಡೆಯುತ್ತಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಬಂದ ನಂತರವಷ್ಟೇ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್ 25ರಂದು ರಿಟ್ಜ್ ಕಾರ್ಲ್ಟನ್ ಹೊಟೆಲ್ ಗೆ ಅಮಿತ್ ಮಿಶ್ರಾ ಮತ್ತು ಅವರ ಗೆಳತಿ ವಂದನಾ ಜೈನ್ ಅವರು ಆಗಮಿಸಿದ್ದರು . ರಾತ್ರಿ ಮಿಶ್ರಾ ಮತ್ತು ವಂದನಾ ಜೈನ್ ನಡುವೆ  ವೈಯುಕ್ತಿಕ ಕಾರಣಕ್ಕಾಗಿ ವಾಗ್ವಾದ ನಡೆದಿದ್ದು, ಮಿಶ್ರಾ ವಂದನಾರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದರು ಎಂದು ವಂದನಾ ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ  ಸೆ.27ರಂದು ಅಶೋಕ್ ನಗರ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.

Write A Comment