ರಾಷ್ಟ್ರೀಯ

ಭಾರತ-ಆಫ್ರಿಕಾ ಶೃಂಗಸಭೆ ಮೇಲೆ ಬೊಕೊ ಹರಮ್, ಇಸಿಸ್ ಕೆಂಗಣ್ಣು: ಗುಪ್ತಚರ ಇಲಾಖೆ ಎಚ್ಚರಿಕೆ

Pinterest LinkedIn Tumblr

sushma-swarajನವದೆಹಲಿ: ಭಾರತ-ಆಫ್ರಿಕಾ ನಡುವಿನ ಶೃಂಗಸಭೆಗೆ ಬೊಕೊ ಹರಮ್ ಮತ್ತು ಇಸಿಸ್ ಬೆದರಿಕೆ ಇದ್ದು, ಶೃಂಗಸಭೆಗೆ ಅಡ್ಡಿಪಡಿಸಲು ಸಂಚು ರೂಪಿಸುತ್ತಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ಅಧಿಕಾರಿಗಳಿಗೆ ಮಂಗಳವಾರ ಎಚ್ಚರಿಕೆ ನೀಡಿದೆ.

ಬೊಕೊ ಹರಮ್ ದಾಳಿ ಕುರಿತಂತೆ ಈಗಾಗಲೇ ಕಾನೂನು ರಚನಾ ಸಂಸ್ಥೆಗೆ ಮಾಹಿತಿ ನೀಡಿರುವ ಗುಪ್ತಚರ ಇಲಾಖೆಯು, ಬೊಕೊ ಹರಮ್ ಹಾಗೂ ಇಸಿಸ್ ಉಗ್ರ ಸಂಘಟನೆಗಳು ಶೃಂಗಸಭೆಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ವಯ ಈಗಾಗಲೇ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು, ಸಭೆಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಗಣ್ಯರಿಗೆ ಸಂಪೂರ್ಣ ಭದ್ರತೆ ಒದಗಿಸಲು ಮುಂದಾಗಿದೆ. ನೈಜೀರಿಯಾದಲ್ಲಿ ಸಕ್ರಿಯವಾಗಿರುವ ಬೊಕೊ ಹರಮ್ ಇದೀಗ ಇಸಿಸ್ ಜೊತೆ ತನ್ನ ರಾಜನಿಷ್ಠೆಯನ್ನು ಸೂಚಿಸಲು ಮುಂದಾಗಿದ್ದು, ಶೃಂಗಸಭೆಯಲ್ಲಿ ಭಾಗವಹಿಸಲಿರುವ ಗಣ್ಯರಿಗೆ ಹೆಚ್ಚಿನ ಅಪಾಯ ಹಾಗೂ ಬೆದರಿಕೆ ಎದುರಾಗಿದೆ. ಅಲ್ಲದೆ, ವಿದೇಶಿ ಪ್ರದೇಶ ನೋಂದಣಿ ಕಚೇರಿ ಹಾಗೂ ಪೊಲೀಸ್ ಇಲಾಖೆಯು ದೆಹಲಿಗೆ ಆಗಮಿಸಿರುವ ಆಫ್ರಿಕನ್ ಪ್ರಜೆಗಳ ಮೇಲೆ ನಿಗಾ ಇರಿಸಿದೆ.

ಗುಪ್ತಚರ ಇಲಾಖೆ ಮಾಹಿತಿಯನ್ವಯ ಈಗಾಗಲೇ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ಭದ್ರತೆಗಾಗಿ ಸುಮಾರು 25,000 ಪೊಲೀಸರು ಹಾಗೂ ಅರೆಸೇನಾ ಸಿಬ್ಬಂದಿಗಳನ್ನು ನೇಮಿಸಿದ್ದು, ದೆಹಲಿಯ ವಿವಿಧೆಡೆ ಆಫ್ರಿಕಾದ ಭದ್ರತಾ ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿವೆ.

ಬೊಕೊ ಹರಮ್ ನೈಜೀರಿಯಾದ ಉಗ್ರಗಾಮಿ ಸಂಘಟನೆಯಾಗಿದ್ದು, ಈ ಉಗ್ರಗಾಮಿ ಸಂಘಟನೆಯು ನೈಜೀರಿಯಾದ ಶಾಲೆಯೊಂದರ 279 ವಿದ್ಯಾರ್ಥಿಗಳನ್ನು ಅಪಹರಿಸುವ ಮೂಲಕ ತನ್ನ ಕುಖ್ಯಾತಿಯನ್ನು ಇಡೀ ಪ್ರಪಂಚಕ್ಕೆ ಪಸರಿಸಿತ್ತು. ಇದೀಗ ಈ ಹಿಂದಿನಿಂದಲೂ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಇಸಿಸ್ ಸಂಘಟನೆಯೊಂದಿಗೆ ಕೈಜೋಡಿಸಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದೆ.

Write A Comment