ನವದೆಹಲಿ,ಅ.25: ರಾಷ್ಟ್ರ ರಾಜಧಾನಿಯಲ್ಲಿ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ನಡೆದ ಪ್ರತ್ಯೇಕ ಘಟನೆಗಳು ಮರೆಯುವ ಮುನ್ನವೇ ಮತ್ತೊಂದು ಅತ್ಯಾಚಾರ ಘಟನೆ ನಡೆದಿದೆ. 15 ವರ್ಷದ ಅಪ್ರಾಪ್ತೆ ಮೇಲೆ ಬಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ.
ದೆಹಲಿಯ ಕೊಳಗೇರಿ ಶಸಿಗಾರ್ಡನ್ನಲ್ಲಿ ಘಟನೆ ನಡೆದಿದೆ. ಕಿರಾಣಿ ಅಂಗಡಿಗೆ ತೆರಳಿದ್ದ ಹುಡುಗಿ ಮನೆಗೆ ವಾಪಸ್ಸಾಗುತ್ತಿದ್ದಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಆಗ ಹುಡುಗಿ ಅವುಗಳಿಂದ ತಪ್ಪಿಸಿಕೊಳ್ಳಲು ದೇವಾಲಯದ ಬಳಿ ಓಡಿ ಹೋಗಿದ್ದಾಳೆ. ಇದನ್ನು ಗಮನಿಸಿದ ದೇವಾಲಯ ಸಮೀಪದ ಮನೆಯೊಂದರ ಬಾಲಕ ತನ್ನ ಮನೆಯೊಳಗೆ ಬಂದು ಸೇರಿಕೊಳ್ಳುವಂತೆ ಹುಡುಗಿಯನ್ನು ಪುಸಲಾಯಿಸಿದ್ದಾನೆ.
ಆದರೆ ಹುಡುಗಿ ಬಾಲಕನ ಮಾತಿಗೆ ಕಿವಿಗೊಡದೆ ತನ್ನ ಮನೆಯತ್ತ ತೆರಳಲು ಹೊರಟಿದ್ದಾಳೆ. ಆಗ ಹುಡಿಗಿಯನ್ನು ತಡೆದ ಬಾಲಕ ತನ್ನ ಮನೆಗೆ ಎಳೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರದ ನಂತರ ಹುಡಿಗಿ ವಿಷಯವನ್ನು ಯಾರ ಬಳಿಯೂ ಬಾಯ್ಬಿಡದಂತೆ ಧಮಕಿ ಹಾಕಿರುವ ಹುಡುಗ ಹುಡುಗಿಯನ್ನು ಆಕೆಯ ಮನೆಗೆ ತೆರಳುವಂತೆ ಹೇಳಿದ್ದಾನೆ.
ಅಂಗಡಿಗೆ ತೆರಳಿದ ತಮ್ಮ ಪುತ್ರಿ ಎಷ್ಟು ಹೊತ್ತು ಕಳೆದರೂ ವಾಪಸ್ಸಾಗದ್ದನ್ನು ಗಮನಿಸಿ ಆತಂಕಕ್ಕೊಳಗಾದ ಪೋಷಕರು ಹುಡುಗಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ತಡವಾಗಿ ಮನೆಗೆ ಬಾಲಕಿ ಬಂದಿದ್ದು, ಕಾರಣ ಏನೆಂದು ವಿಚಾರಿಸಿದಾಗ ಹುಡುಗಿ ನಡೆದ ವಿಷಯ ಬಾಯ್ಬಿಟ್ಟಿದ್ದಾಳೆ.
ಹುಡುಗಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹುಡುಗಿಯ ಪೋಷಕರು ನೀಡಿದ ದೂರಿನ ಮೇರೆಗೆ ಪಾಂಡವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹುಡುಗ ಮಾದಕದ್ರವ್ಯ ವ್ಯಸನಿಯಾಗಿದ್ದು, ಮದ್ಯಪಾನವನ್ನೂ ಸೇವಿಸುತ್ತಿದ್ದ. ಅವನು ಅಮಲಿನಲ್ಲಿದ್ದಾಗ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿ ಮೇಲೆ ಅತ್ಯಾಚಾರ ನಡೆದಿರುವುದನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.
ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ದೆಹಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆರೋಪಗಳ ಸುರಿಮಳೆಗೈದಿದ್ದು, ಇದೀಗ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿರುವುದು ಮತ್ತೆ ಯಾವ ರಜಕೀಯ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.
