ರಾಷ್ಟ್ರೀಯ

ಲಲಿತ್ ಮೋದಿಯನ್ನು ಭಾರತಕ್ಕೆ ಯಾವಾಗ ಕರೆತರುತ್ತೀರಿ: ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ

Pinterest LinkedIn Tumblr

modiನವದೆಹಲಿ: ಹಣ ದುರುಪಯೋಗ ಆರೋಪ ಎದುರಿಸುತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯನ್ನು ಲಂಡನ್‌ನಿಂದ ಭಾರತಕ್ಕೆ ನಿಗದಿತ ಅವಧಿಯಲ್ಲಿ ಕರೆತರುವ ಬಗ್ಗೆ ಕೇಂದ್ರ ಸರಕಾರ ಮಾಹಿತಿ ನೀಡಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಎನ್‌ಡಿಎ ಸರಕಾರದ ಬೆಂಬಲ ಪಡೆದು ಲಂಡನ್‌ನಲ್ಲಿ ಲೈಫ್ ಎಂಜಾಯ್ ಮಾಡುತ್ತಿರುವ ಲಲಿತ್ ಮೋದಿಯನ್ನು ಯಾವಾಗ ಭಾರತಕ್ಕೆ ಕರೆಸಿಕೊಳ್ಳಲಾಗುವುದು ಎನ್ನುವ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಬೇಕು. ಸಂಸತ್ತಿನ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲು ಸಿದ್ದವಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಹಣ ದುರುಪಯೋಗ ಎದುರಿಸುತ್ತಿರುವ ಲಲಿತ್ ಮೋದಿಯನ್ನು ಭಾರತಕ್ಕೆ ವಾಪಸ್ ಕಳಿಸುವಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಇಂಗ್ಲೆಂಡ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ಖಾಸಗಿ ಚಾನೆಲ್‌ಗಳು ಸುದ್ದಿ ಬಿತ್ತರಿಸುತ್ತಿದ್ದಂತೆ ಕಾಂಗ್ರೆಸ್ ಬಹಿರಂಗ ಹೇಳಿಕೆ ನೀಡಿದೆ.

ಕಳೆದ ಐದು ವರ್ಷಗಳಿಂದ ಲಲಿತ್ ಮೋದಿ ಲಂಡನ್‌ನಲ್ಲಿ ವಾಸವಾಗಿದ್ದು, ಹಣ ದುರುಪಯೋಗ ಕುರಿತಂತೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಭೀತಿಯನ್ನು ಎದುರಿಸುತ್ತಿದ್ದಾರೆ.

ಕೇಂದ್ರದ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ, ಲಲಿತ್ ಮೋದಿಗೆ ಬೆಂಬಲ ನೀಡಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ.

Write A Comment