ನವದೆಹಲಿ: ದೇಶದ ರಾಜಧಾನಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ರೇಪ್ ಗೆ ಒಳಗಾಗಿರುವ ಹಿನ್ನಲೆಯಲ್ಲಿ ಮತ್ತೆ ಪ್ರಧಾನ ಮಂತ್ರಿಯವರ ಮೇಲೆ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜದಾನಿಯಲ್ಲಿ ಅಪರಾಧ ಕಡಿಮೆಯಾಗುವವರೆಗೂ ಮೋದಿಗೆ ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
“ನಾನು ಶೀಲಾ ದೀಕ್ಷಿತ್ ಅಲ್ಲ. ಪ್ರಧಾನಿಗೆ ನೆಮ್ಮದಿಯಾಗಿ ನಿದ್ದೆ ಮಾಡಲೂ ಬಿಡುವುದಿಲ್ಲ” ಎಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ ನಂತರ ಹೇಳಿದ್ದಾರೆ.
“ಅವರು ವಿದೇಶಕ್ಕೆ ಹೋಗಬಹುದಾದರೆ, ರೇಪ್ ಸಂತ್ರಸ್ತರ ಕುಟುಂಬ ವರ್ಗವನ್ನು ಭೇಟಿ ಮಾಡಲು ಅಸಾಧ್ಯವೇಕೆ?” ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಕೇಳಿದ್ದಾರೆ.
ಈ ಎರಡು ಪ್ರತ್ಯೇಕ ರೇಪ್ ಘಟನೆಗಳ ನಂತರ ಮಹಿಳಾ ಸುರಕ್ಷತೆಯ ಬಗ್ಗೆ ಚರ್ಚಿಸಲು ಮಂಗಳವಾರ ಸಂಪುಟ ಸಭೆಯನ್ನು ಕರೆದಿದ್ದಾರೆ.
ಕೇಂದ್ರ ಸರ್ಕಾರದ ಗೃಹ ಸಚಿವಾಲಯದಡಿ ಬರುವ ದೆಹಲಿ ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೂಡ ಕೇಜ್ರಿವಾಲ್ ದೂರಿದ್ದಾರೆ.
“ನಮ್ಮ ಸುಪರ್ದಿಗೆ ದೆಹಲಿ ಪೊಲೀಸ್ ಇಲಾಖೆಯನ್ನು ಒಂದು ವರ್ಷದವರೆಗೆ ಒಪ್ಪಿಸಿ. ನಾವು ಸುಧಾರಣೆ ತರುತ್ತೇವೆ. ಇಡಿ ದೆಹಲಿಗೆ ಬೇಡ, ಕೇವಲ ಪೂರ್ವ ದೆಹಲಿಗೆ ಕೊಟ್ಟು ನೋಡಿ” ಎಂದು ಪ್ರಧಾನಿಗೆ ಕೇಜ್ರಿವಾಲ್ ಸವಾಲು ಎಸೆದಿದ್ದಾರೆ.
“ಈ ಅವಧಿಯಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸುಧಾರಿಸದೆ ಹೋದರೆ ಅದನ್ನು ಮತ್ತೆ ವಾಪಸ್ ಪಡೆಯಿರಿ” ಎಂದು ಕೂಡ ಸವಾಲು ಹಾಕಿದ್ದಾರೆ.