ಮುಂಬಯಿ: ದೀಪಿಕಾ ಪಡುಕೋಣೆ ಸೌಂದರ್ಯ, ಪ್ರತಿಭೆಗಳೆರಡೂ ಇರೋ ಅದ್ಭುತ ನಟಿ. ಈ ನಟಿ ಇದೀಗ ತನ್ನಲ್ಲಿನ ತಾನೋರ್ವ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಎಂಬುದನ್ನು ಜಗಜ್ಜಾಹೀರಗೊಳಿಸಿದ್ದಾರೆ.
ಈ ನಟಿ ಹಿಂದೊಮ್ಮೆ ಯಾವುದೋ ಕಾರಣಕ್ಕೆ ಖಿನ್ನತೆಗೊಳಗಾಗಿ ಬದುಕಿನ ಮೇಲೆ ಆಸೆ ಕಳೆದುಕೊಂಡು ಒಂದು ರೀತಿಯ ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿದ್ದಳಂತೆ. ಆದರೆ ಆದಷ್ಟು ಬೇಗ ಅಪ್ಪ, ಅಮ್ಮ, ಕುಟುಂಬದ ಸದಸ್ಯರ ನೆರವು, ಸೂಕ್ತ ಚಿಕಿತ್ಸೆಯೊಂದಿಗೆ ಸಹಜ ಸ್ಥಿತಿಗೆ ಮರಳಿದ್ದಾಳೆ. ಚಿತ್ರರಂಗದಲ್ಲಿ ಸ್ಟಾರ್ ಹಣ, ಹೆಸರುಗಳೆಲ್ಲವನ್ನೂ ಸಾಧಿಸಿದ್ದಾಳೆ. ಹೀಗಿರುವಾಗ ತನ್ನಂತೆ ಖಿನ್ನತೆಗೊಳಗಾಗಿ ನಿರಾಶರಾಗಿ ಬದುಕಿನ ಮೇಲೆ ಆಸೆ ಕಳೆದುಕೊಂಡಿರುವ ಜನರ ಒಳಿತಿಗಾಗಿ ಏನಾದ್ರೂ ಸಹಾಯ ಮಾಡೋಣ ಅಂತಾ ಭಾವಿಸಿದ್ದಾಳೆ.
ಇದರ ಭಾಗವಾಗಿಯೇ ‘ ಲಿವ್ ಲವ್ ಲಾಫ್ ಫೌಂಡೇಶನ್’ ಎನ್ನೋ ಹೆಸರಿನ ಒಂದು ಎನ್‌ಜಿಒ ಆರಂಭಿಸಿದ್ದಾರೆ. ಮುಂಬೈನಲ್ಲಿ ಮೊನ್ನೆ ಶನಿವಾರ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜ್ವಲ ಪಡುಕೋಣೆ ಸಮಕ್ಷಮದಲ್ಲಿ ಈ ಸಂಘಟನೆ ಆರಂಭಿಸಿದ್ದಾರೆ. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ದೀಪಿಕಾಗೆ ಶುಭ ಹಾರೈಸಿದರು.
ತನ್ನಂತೆ ಖಿನ್ನತೆಗೊಳಗಾಗಿ ಬದುಕು ದುರ್ಭರವಾಗಿರುವ ಜನರಿಗೆ ಈ ಸಂಸ್ಥೆ ನೆರವಾಗಲಿದೆ ಎಂದ ದೀಪಿಕಾ, ಸಂಸ್ಥೆಯ ಧ್ಯೇಯೋದ್ದೇಶ ವಿವರಿಸಿದರು. ದೇಹದ ಆರೋಗ್ಯದ ಬಗ್ಗೆ ಮಾತನಾಡಿದಷ್ಟು ಸುಲಭವಾಗಿ ಜನ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದಿಲ್ಲ. ಒಳಗೊಳಗೆ ಕುದ್ದು ಹೋಗಿ ಬದುಕನ್ನು ದುರ್ಭರವಾಗಿಸಿಕೊಳ್ಳುತ್ತಾರೆ. ಅಂತವರಿಗೆ ಕೌನ್ಸೆಲಿಂಗ್ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಈ ಸಂಸ್ಥೆ ಅವಗಾಹನೆ ಮೂಡಿಸಲಿದೆ ಎಂದು ದೀಪಿಕಾ ಹೇಳಿದರು.
ಇನ್ನು ಮಹಾ ಸಿಎಂ ದೇವೇಂದ್ರ ಫಡ್ನವಿಸ್ ದೀಪಿಕಾ ಎದುರು ದೊಡ್ಡ ಟಾಸ್ಕ್ ಮುಂದಿರಿಸಿದರು. ರೈತರ ಆತ್ಮಹತ್ಯೆ ತಡೆಗೆ ದೀಪಿಕಾ ಮುಂದಾಗಬೇಕು ಎಂದು ಮನವಿ ಮಾಡಿದರು. ಸುಮಾರು ಶೇಕಡ 40ರಷ್ಟು ರೈತರು ಖಿನ್ನತೆಗೆ ಒಳಗಾಗಿದ್ದಾರೆ. ಆತ್ಮಹತ್ಯೆಗೆ ಯೋಚಿಸುತ್ತಿದ್ದಾರೆ ಎಂಬ ಭಯಾನಕ ವಿಷಯ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಅವರಿಗೆ ಜೀವನದಲ್ಲಿ ಒಂದು ಭರವಸೆ, ಆಶಾಕಿರಣ ದೀಪಿಕಾ ಮೂಡಿಸಬೇಕು. ಕೌನ್ಸೆಲಿಂಗ್, ಸಮಾಲೋಚನೆ ಮೂಲಕ ಆ ರೈತರನ್ನು ಸಮಸ್ಯೆಯಿಂದ ಮುಕ್ತರಾಗಿಸಬೇಕು.
ಸರ್ಕಾರ ಪ್ಯಾಕೇಜ್ ಆರ್ಥಿಕ ನೆರವು ಅಂತಾ ಏನೇ ಮಾಡಿದರೂ ರೈತರಿಗೆ ಕೌನ್ಸೆಲಿಂಗ್ ಅಗತ್ಯವಾಗಿದೆ. ಆದ್ದರಿಂದ ದೀಪಿಕಾ ಆ ಕೆಲಸ ಮಾಡಬೇಕು ಅಂತಾ ಫಡ್ನವಿಸ್ ಕೇಳಿಕೊಂಡಿದ್ದಾರೆ.
