ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ತನ್ನ ಪಕ್ಷದಲ್ಲೇ ಭ್ರಷ್ಟಚಾರ ನಡೆಯುತ್ತಿದ್ದರೂ ಸುಮ್ಮನಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ನಿನ್ನೆಯಷ್ಟೇ ದಿಟ್ಟ ಉತ್ತರ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಹಾರ ಮತ್ತು ಸರಬರಾಜು ಸಚಿವ ಆಸೀಂ ಖಾನ್ ಅವರನ್ನು ವಜಾಗೊಳಿಸಿದ್ದರು. ಇದೀಗ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ಅವರು ಪಕ್ಷದ ಶಾಸಕರನ್ನು ಭಾನುವಾರ ಭೇಟಿ ಮಾಡಿರುವುದಾಗಿ ತಿಳಿದುಬಂದಿದೆ.
ಇಂದು ಆಮ್ ಆದ್ಮಿ ಪಕ್ಷದ ಶಾಸಕರನ್ನು ಭೇಟಿ ಮಾಡಿರುವ ಅವರು, ಪಕ್ಷದ ಹಿನ್ನೆಲೆ, ಸಿದ್ಧಾಂತ ವಾದ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನು ಮರೆಯದಂತೆ ಹೇಳಿದ್ದು, ಘಟನೆ ಮರುಕಳಿಸದಂತೆ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ವಕ್ಷದ ಶಾಸಕರನ್ನು ಭೇಟಿ ಮಾಡಿರುವ ಕುರಿತಂತೆ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಕೇಜ್ರಿವಾಲ್ ಅವರು, ಪಕ್ಷ ರಾಜಕೀಯ ರಂಗಕ್ಕೆ ಇಳಿಯಲು ಪ್ರಮುಖ ಕಾರಣವನ್ನು ಮನದಟ್ಟು ಮಾಡಿಕೊಳ್ಳುವಂತೆ ಶಾಸಕರಿಗೆ ಹೇಳಿದ್ದು, ಆಸೀಂ ಖಾನ್ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಆಸೀಂ ಖಾನ್ ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ದಿಲೀಪ್ ಪಾಂಡೆ ಅವರು, ಬಡತನ ಹಾಗೂ ಅವಮಾನವನ್ನು ಬೇಕಿದ್ದರೆ ನಾವು ಸಹಿಸಿಕೊಳ್ಳುತ್ತೇವೆ. ಆದರೆ, ಭ್ರಷ್ಟಚಾರವನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.