ಹೊಸದಿಲ್ಲಿ, ಅ.9: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಕರಾವಳಿಯಲ್ಲಿ ಪ್ರಬಲ ಗಾಳಿಯೊಂದಿಗೆ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಪೂರ್ವ-ಕೇಂದ್ರ ಭಾಗದಲ್ಲಿದ್ದ ವಾಯುಭಾರ ಕುಸಿತವು ಉತ್ತರದ ಕಡೆಗೆ ಚಲಿಸುತ್ತಿದೆ. ಕಳೆದ ಆರು ಗಂಟೆಗಳಿಂದ ಭಾರೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಶುಕ್ರವಾರ ಸಂಜೆ 5:30 ಹೊತ್ತಿಗೆ ಗೋವಾ ಕರಾವಳಿಯಿಂದ ಪಶ್ಚಿಮ-ನೈಋತ್ಯಕ್ಕೆ 400 ಕಿ.ಮೀ. ದೂರದಲ್ಲಿ ವಾಯುಭಾರ ಕುಸಿತ ಕೇಂದ್ರೀಕೃತವಾಗಿತ್ತು ಎಂದು ಐಎಂಡಿ ತಿಳಿಸಿದೆ.
ವಾಯುಭಾರ ಕುಸಿತವು ಉತ್ತರ-ಈಶಾನ್ಯದೆಡೆಗೆ ನಿಧಾನವಾಗಿ ಚಲಿಸುತ್ತಿದ್ದು, ಮುಂದಿನ 36 ಗಂಟೆಗಳಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಲಿದೆ. ವಾಯುಭಾರ ಕುಸಿತವು ಈವರೆಗೆ ಚಂಡಮಾರುತವಾಗಿ ರೂಪುಗೊಳ್ಳುವ ಲಕ್ಷಣ ತೋರಿಸಿಲ್ಲ ಎಂದು ಐಎಂಡಿ ಹೇಳಿದೆ.