ಮುಂಬೈ, ಅ.9: ದಾದ್ರಿ ಹತ್ಯೆ ಘಟನೆಗೆ ಪ್ರತಿಭಟನೆ ವ್ಯಕ್ತಪಡಿಸಿ ಉರ್ದು ಸಾಹಿತಿ ರಹ್ಮಾನ್ ಅಬ್ಬಾಸ್ ಮಹಾರಾಷ್ಟ್ರ ರಾಜ್ಯ ಉರ್ದು ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.
ಈ ಮಧ್ಯೆ, ಖ್ಯಾತ ಆಂಗ್ಲ ಬರಹಗಾರ್ತಿ ಶಶಿ ದೇಶಪಾಂಡೆ ಕೇಂದ್ರ ಸಾಹಿತ್ಯ ಅಕಾಡಮಿಯ ಸಾಮಾನ್ಯ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ದಾದ್ರಿ ಹತ್ಯೆ ಘಟನೆಯ ನಂತರ ಉರ್ದು ಲೇಖಕರ ಸಮುದಾಯವು ಬಹಳ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ ನಾನು ಪ್ರಶಸ್ತಿಯನ್ನು ವಾಪಸ್ ಮಾಡುತ್ತಿದ್ದೇನೆ ಎಂದು ಅಬ್ಬಾಸ್ ಹೇಳಿದ್ದಾರೆ.
ಇನ್ನೂ ಕೆಲವು ಉರ್ದು ಲೇಖಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಯಸಿದ್ದಾರೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಇದು ಸರಿಯಾದ ಸಮಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಮೂರನೆ ಕಾದಂಬರಿ ‘ಖುದಾ ಕೆ ಸಾಯೆ ಮೆ ಆಂಖೆ ಮಿಚೋಲಿ’ಗಾಗಿ ಅಬ್ಬಾಸ್ 2011ರಲ್ಲಿ ಅಕಾಡಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಶಶಿ ದೇಶಪಾಂಡೆ ರಾಜೀನಾಮೆ
ಕನ್ನಡದ ಖ್ಯಾತ ಸಂಶೋಧಕ ಹಾಗೂ ಲೇಖಕ ಎಂ.ಎಂ.ಕಲಬುರ್ಗಿ ಹತ್ಯೆ ಘಟನೆಯನ್ನು ಖಂಡಿಸುವಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ವಿಫಲವಾಗಿದೆ ಎಂದು ದೂರಿ ಬರಹಗಾರ್ತಿ ಶಶಿ ದೇಶಪಾಂಡೆ ಅಕಾಡಮಿಯ ಸಾಮಾನ್ಯ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿಯ ವರ್ತನೆಯಿಂದ ನನಗೆ ಬಹಳ ಅಸಮಾಧಾನ ಉಂಟಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ಡಾ.ವಿಶ್ವನಾಥ್ ಪ್ರಸಾದ್ ತಿವಾರಿ ಅವರಿಗೆ ಬರೆದಿರುವ ಪತ್ರದಲ್ಲಿ ದೇಶಪಾಂಡೆ ಹೇಳಿದ್ದಾರೆ.