ರಾಷ್ಟ್ರೀಯ

ಬಿಜೆಪಿಯಿಂದ ಕೋಮುದ್ವೇಷ: ರಾಹುಲ್

Pinterest LinkedIn Tumblr

CMRahಮಂಡ್ಯ: ಆತ್ಮಹತ್ಯೆಗೈದ ರೈತರ ಕುಟುಂಬಗಳಿಗೆ ರಾಹುಲ್ ಸಾಂತ್ವನ; ಭೇಟಿಯಂದೇ ಇನ್ನೊಬ್ಬ ರೈತ ಆತ್ಮಹತ್ಯೆ
ಮಂಡ್ಯ, ಅ.9: ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷವನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಕೆಲಸವನ್ನು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಶುಕ್ರವಾರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿ, ರೈತರ ಜೊತೆ ಸಂವಾದ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜಕೀಯ ಧ್ರುವೀಕರಣ ತಂತ್ರ ಹೊಸದೇನೂ ಅಲ್ಲ. ಅದಕ್ಕೆ ಸುದೀರ್ಘ ಇತಿಹಾಸವಿದೆ ಎಂದು ಟೀಕಿಸಿದರು.
ಕೋಮು ಸೌಹಾರ್ದತೆಗೆ ಇಡೀ ವಿಶ್ವಕ್ಕೇ ಮಾದರಿ ಪ್ರಜಾತಂತ್ರ ವ್ಯವಸ್ಥೆಯಾಗಿರುವ ಭಾರತ ದೇಶ ಇಂದು ಅತ್ಯಂತ ಅಪಾಯಕಾರಿ ಬೆಳವಣಿಗೆಗಳನ್ನು ಕಾಣುತ್ತಿದೆ. ‘ದಾದ್ರಿ’ ಪ್ರಕರಣ ಸೇರಿದಂತೆ ಇತ್ತೀಚಿನ ಕೆಲವು ಬೆಳವಣಿಗೆಗಳು ಬಿಜೆಪಿ ಮತ್ತು ಮೋದಿಯ ನಿಜಬಣ್ಣವನ್ನು ಬಯಲು ಮಾಡಿವೆ ಎಂದು ಅವರು ಹೇಳಿದರು.
ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಯಾವುತ್ತೂ ದೇಶದಲ್ಲಿ ಕೋಮು ಸೌಹಾರ್ದ ತೆಗೆ ಧಕ್ಕೆಯಾಗುವಂತಹ ನೀತಿ ಅನುಸರಿಸಿ ರಲಿಲ್ಲ. ದೇಶದ ಎಲ್ಲ ಜನರನ್ನೂ ಸಮಾನ ವಾಗಿ ಕಾಣುತ್ತಾ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಿದೆ ಎಂದು ಅವರು ಹೇಳಿಕೊಂಡರು.
ಕೃಷಿಕರ ಬಗ್ಗೆ ತಾರತಮ್ಯ: ದೇಶದ ಕೃಷಿ ಕ್ಷೇತ್ರ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಇದಕ್ಕೆಲ್ಲ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ರೈತರೋಧಿ ನೀತಿಯೇ ಕಾರಣ. ಎನ್‌ಡಿಎ ಸರಕಾರ ದೇಶದ ರೈತರು, ಕಾರ್ಮಿಕರನ್ನು ನಗಣ್ಯ ಮಾಡಿದೆ. ಹಾಗಾಗಿ ಇಡೀ ದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಹುಲ್ ಹೇಳಿದರು.
ರೈತರ ಕಷ್ಟ ಆಲಿಸಿ: ತಾನು ಈ ದೇಶದ ಸಮಸ್ತ ಜನರ ಪ್ರಧಾನಿ ಎಂಬುದನ್ನು ಮರೆತಿರುವ ಮೋದಿ, ಸದಾ ವಿದೇಶ ಪ್ರವಾಸದಲ್ಲಿ ಕಳೆದುಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದ ರಾಹುಲ್ ಗಾಂಧಿ, ಮೋದಿಯವರು ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಿ ರೈತರ ಕಷ್ಟವನ್ನೂ ಆಲಿಸಬೇಕೆಂದು ಸಲಹೆ ಮಾಡಿದರು.

ಮೃತ ರೈತ ಲೋಕೇಶ್‌ಗೆ ರಾಹುಲ್ ನಮನ
ಮಂಡ್ಯ, ಅ.9: ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಸಚಿವರು, ಶುಕ್ರವಾರ ಪಾಂಡವಪುರ ತಾಲೂಕಿನ ಸಣಬದಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಗುರುವಾರ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಲೋಕೇಶ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಮಂಡ್ಯಕ್ಕೆ ಆಗಮಿಸಿದ ರಾಹುಲ್, ಮೃತ ರೈತನ ಪತ್ನಿ, ಮಕ್ಕಳು, ಕುಟುಂಬದವರನ್ನು ಸಂತೈಸಿದರು. ಸ್ಥಳದಲ್ಲಿಯೇ 1 ಲಕ್ಷ ರೂ. ಪರಿಹಾರ ವಿತರಿಸಿದರು.
ಲೋಕೇಶ್ ಕುಟುಂಬ ಸೇರಿದಂತೆ ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು. ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸಬೇಕು ಎಂದು ಇದೇ ವೇಳೆ ಗ್ರಾಮಸ್ಥರು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತಾತಿಯಿಸಿದರು.

ಕೆ.ಆರ್.ಪೇಟೆ ಸಾವಿಗೆ ಶರಣಾದ ರೈತ
ಕೃಷ್ಣರಾಜಪೇಟೆ, ಅ.9: ಸಾಲದ ಬಾಧೆಯಿಂದ ಘಟಿಸುತ್ತಿರುವ ರೈತರ ಆತ್ಮಹತ್ಯೆಗಳು ತಾಲೂಕಿನಲ್ಲಿ ಮುಂದುವರಿದಿದ್ದು, ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದ ರೈತ ಮಹದೇವಯ್ಯ(65) ಎಂಬವರು ತಮ್ಮ ಗ್ರಾಮದ ಸಮೀಪದ ಅಘಲಯ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ. ರೈತ ಮಹದೇವಯ್ಯರಿಗೆ ಪತ್ನಿ ರಾಧಮ್ಮ, ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದು ಮಕ್ಕಳೆಲ್ಲರೂ ವಿವಾಹಿತರಾಗಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ನಾಯಸಿಂಗನಹಳ್ಳಿ ಗ್ರಾಮದ ಪುರಸಯ್ಯನ ಮಗ ಮಹದೇವಯ್ಯ ಅವರಿಗೆ 4 ಎಕರೆ 14 ಗುಂಟೆ ಜಮೀನು ಇದೆ. ಸಂಪೂರ್ಣ ಮಳೆ ಆಶ್ರಿತ ಭೂಮಿ ಇದಾಗಿದ್ದು ಮೃತ ಮಹದೇವಯ್ಯ ಅಘಲಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಸುಮಾರು 1.5 ಲಕ್ಷ ರೂ ಸಾಲ ಮಾಡಿ ತಮ್ಮ ಜಮೀನಿನಲ್ಲಿ ಎರಡು ಕೊಳವೆ ಬಾವಿ ತೋಡಿಸಿದ್ದರು. ಆದರೆ ಈ ಎರಡೂ ಬಾವಿಗಳಲ್ಲಿ ನೀರು ಬರಲಿಲ್ಲ. ಈ ಮದ್ಯೆ ಮಕ್ಕಳ ಮದುವೆ ಮುಂತಾದ ಕಾರ್ಯಗಳಿಗೆ ಇವರು ಸುಮಾರು 3 ಲಕ್ಷರೂ ಗಳಷ್ಟು ಕೈಸಾಲ ಮಾಡಿಕೊಂಡಿದ್ದರು. ಮೃತರಿಗೆ ಮೂರು ಜನ ಗಂಡು ಮಕ್ಕಳಿದ್ದು ಮಳೆಯಿಲ್ಲದೆ ಕೃಷಿ ಅಸಾಧ್ಯವಾಗಿದ್ದು ಇವರೆಲ್ಲರೂ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಬೆಳೆಯಿಲ್ಲದೆ ಮಾಡಿದ ಸಾಲ ತೀರಿಸಲಾಗದೆ ಅಸಹಾಯಕರಾಗಿದ್ದ ಮಹದೇವಯ್ಯ ನಿನ್ನೆ ರಾತ್ರಿ ಗುರುವಾರ 08 ಘಂಟೆಯ ಸಮಯದಲ್ಲಿ ಮನೆಯಿಂದ ಹೊರಬಿದ್ದವರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಅಘಲಯ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಅಘಲಯ ಕೆರೆಯಲ್ಲಿ ರೈತನ ಶವ ಪತ್ತೆಯಾಗಿದೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರೈತರಿಗಾಗಿ ಇಂದು ಹೊಸ ಯೋಜನೆ ಘೋಷಣೆ
ಬೆಂಗಳೂರು, ಅ. 9: ರಾಜ್ಯ ಸರಕಾರವು ರೈತರ ಪರವಾಗಿದ್ದು, ಯಾವುದೇ ಕಾರಣಕ್ಕೂ ಅವರು ಧೃತಿಗೆಡುವ ಅಗತ್ಯವಿಲ್ಲ. ರೈತರ ಕಲ್ಯಾಣಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ಶನಿವಾರ ಹಾವೇರಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಕಟಿಸಲಾಗುವುದು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ‘ಗ್ರಾಮ ಸ್ವರಾಜ್ಯ’ ಸಮಾವೇಶವನ್ನು ಉದ್ಘಾಟಿಸಿ ಕನ್ನಡದಲ್ಲಿ ‘ಎಲ್ಲರಿಗೂ ನಮಸ್ಕಾರ’ ಎಂದು ಅವರು ಭಾಷಣ ಆರಂಭಿಸಿದರು.
ರೈತರಿಗಾಗಿಯೆ ಇಲ್ಲಿಗೆ ಬಂದಿದ್ದೇನೆ. ದೇಶದ ವಿವಿಧ ಪ್ರದೇಶಗಳಲ್ಲಿ ರೈತರು ಸಂಕಷ್ಟದಲ್ಲಿದ್ದು, ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಸಚಿವರು ಹಾಗೂ ಮುಖ್ಯಮಂತ್ರಿ ಜೊತೆ ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದು, ಹಾವೇರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿಯ ಸಿದ್ದರಾಮಯ್ಯ ಹೊಸ ಕಾರ್ಯಕ್ರಮಗಳನ್ನು ಘೋಷಿಸಲಿದ್ದಾರೆ ಎಂದು ಅವರು ಹೇಳಿದರು. ಕರ್ನಾಟಕದ ರೈತ, ದೇಶದ ರೈತ. ಆದರೆ, ನರೇಂದ್ರಮೋದಿ ನೇತೃತ್ವದ ಸರಕಾರ ರಾಜ್ಯದ ರೈತರನ್ನು ದೇಶದ ರೈತ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆದುದರಿಂದಲೆ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವಂತೆ ಕೋರಿ ರಾಜ್ಯ ಸರಕಾರ ತನ್ನ ಹಕ್ಕು ಕೇಳಿದರೆ, ಅದಕ್ಕೆ ಉತ್ತರಿಸುವುದಿಲ್ಲ ಎಂದು ಅವರು ಕಿಡಿಕಾರಿದರು.
ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪಮೊಯ್ಲಿ, ಎಸ್.ಎಂ.ಕೃಷ್ಣ, ಎನ್.ಧರಂಸಿಂಗ್, ಕೇಂದ್ರದ ಮಾಜಿ ಸಚಿವರಾದ ಡಾ.ಕೆ.ರಹ್ಮಾನ್‌ಖಾನ್, ಕೆ.ಎಚ್.ಮುನಿಯಪ್ಪ, ಆಸ್ಕರ್ ಫರ್ನಾಂಡೀಸ್, ಸಚಿವರಾದ ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಮೇಶ್‌ಕುಮಾರ್ ವರದಿ ಶಿಫಾರಸ್ಸು ಜಾರಿ: ಗ್ರಾಮ ಸಭೆ ಹಾಗೂ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ರಮೇಶ್‌ಕುಮಾರ್ ನೇತೃತ್ವದ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಶೀಘ್ರದಲ್ಲೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

Write A Comment