ಶ್ರೀನಗರ, ಅ.8: ಗೋಹತ್ಯೆಯ ಮೇಲೆ ವಿಧಿಸಲಾಗಿರುವ ನಿರ್ಬಂಧಗಳ ವಿರುದ್ಧ ಪ್ರತಿಭಟಿಸಲು ‘ಬೀಫ್ ಪಾರ್ಟಿ’ ಆಯೋಜಿಸಿದ್ದ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಒಳಗೆ ಬಿಜೆಪಿ ಶಾಸಕರು ಗುರುವಾರ ಹಲ್ಲೆ ನಡೆಸಿದ್ದಾರೆ.
ವಿಧಾನಸಭೆಯ ಕಲಾಪ ಆರಂಭಗೊಳ್ಳುವ ಮೊದಲು ಸದನಕ್ಕೆ ರಶೀದ್ ಪ್ರವೇಶಿಸುತ್ತಿದ್ದಾಗ ಬಿಜೆಪಿ ಶಾಸಕರು ಅವರಿಗೆ ಹೊಡೆಯಲು ಆರಂಭಿಸಿದರು. ಸುದ್ದಿವಾಹಿನಿಗಳಲ್ಲಿ ಬಿತ್ತರಗೊಂಡ ದೃಶ್ಯಗಳು ಬಿಜೆಪಿ ಶಾಸಕರು ರಶೀದ್ರನ್ನು ಹಿಡಿದು ಥಳಿಸುವುದನ್ನು ತೋರಿಸಿದವು.
ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ರಶೀದ್ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಬಿಜೆಪಿ ಸಮ್ಮಿಶ್ರ ಸರಕಾರವನ್ನು ನಡೆಸುತ್ತಿವೆ.
‘‘ರಶೀದ್ ಮಾಡಿದ ಕೆಲಸದ ಬಗ್ಗೆ ಯಾರಿಗಾದರೂ ಆಕ್ಷೇಪಗಳಿದ್ದರೆ, ಅವರು ಆ ಬಗ್ಗೆ ಸದನದಲ್ಲಿ ಚರ್ಚೆ ಮಾಡಬೇಕಾಗಿತ್ತು. ಆದರೆ, ಓರ್ವ ವ್ಯಕ್ತಿ ಏನು ತಿನ್ನುತ್ತಾನೆ ಎನ್ನುವ ವಿಚಾರದಲ್ಲಿ ಆತನ ಮೇಲೆ ನೀವು ಹಲ್ಲೆ ನಡೆಸುವುದು ಸಾಧ್ಯವಿಲ್ಲ. ಈ ಜನರು ದಾದ್ರಿಯಲ್ಲಿ ಏನು ಮಾಡಿದ್ದಾರೋ ಅದನ್ನೇ ಇಲ್ಲಿಯೂ ಮಾಡಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಅಬ್ದುಲ್ಲಾ ಹೇಳಿದರು.
ದಾದ್ರಿಯಲ್ಲಿ ಓರ್ವ ವ್ಯಕ್ತಿ ಗೋಮಾಂಸ ತಿಂದಿದ್ದಾರೆ ಎಂಬ ವದಂತಿಗಳ ಆಧಾರದಲ್ಲಿ ಅವರನ್ನು ಗುಂಪೊಂದು ಇತ್ತೀಚೆಗೆ ಥಳಿಸಿ ಕೊಂದಿತ್ತು.
ಅವಾಮಿ ಇತ್ತಿಹಾದ್ ಪಾರ್ಟಿಯ ಮುಖ್ಯಸ್ಥ ರಶೀದ್ರನ್ನು ಪ್ರತಿಪಕ್ಷಗಳ ಸದಸ್ಯರು ಬಿಜೆಪಿ ಶಾಸಕರಿಂದ ಬಿಡಿಸಿಕೊಳ್ಳದಿದ್ದರೆ ಅವರು ಗಂಭೀರವಾಗಿ ಗಾಯಗೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆಯನ್ನು ಪ್ರತಿಭಟಿಸಿ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಸೇರಿದಂತೆ ಇಡೀ ಪ್ರತಿಪಕ್ಷ ಸದನದಿಂದ ಹೊರನಡೆಯಿತು. ಘಟನೆಗೆ ಬಿಜೆಪಿ ಕ್ಷಮೆ ಕೋರುತ್ತದೆ ಎಂದು ಸರಕಾರ ಭರವಸೆ ನೀಡಿದ ಬಳಿಕ ಅವರು ವಾಪಸ್ ಬಂದರು.
ಕ್ಷಮೆ ಕೋರುವಂತೆ ಮುಖ್ಯಮಂತ್ರಿ ಸೂಚಿಸಿದಾಗ, ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ನಿರ್ಮಲ್ ಸಿಂಗ್ ಕ್ಷಮೆ ಕೋರಿದರು. ಆದರೆ, ರಶೀದ್ ಬೀಫ್ ಪಾರ್ಟಿ ಆಯೋಜಿಸಿದುದು ಸರಿಯಲ್ಲ ಎಂದೂ ಹೇಳಿದರು.
ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಗುರುವಾರ, ರಶೀದ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಸಿಪಿಎಂ ಶಾಸಕರು ಮಂಡಿಸಿದ ಮಸೂದೆಯ ಬಗ್ಗೆ ಸದನದಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿತ್ತು. ರಾಜ್ಯದಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಮಾರಾಟ ಮತ್ತು ಖರೀದಿ ನಿಷೇಧಿಸುವ 1862ರ ಕಾನೂನನ್ನು ರದ್ದುಪಡಿಸಬೇಕು ಎಂದು ಕೋರುವ ಮಸೂದೆ ಅದಾಗಿತ್ತು.
ರಾಷ್ಟ್ರೀಯ