ರಾಷ್ಟ್ರೀಯ

ವಿದೇಶಿ ಯುದ್ಧ ವಿಮಾನ ಖರೀದಿಗೆ ಕೇಂದ್ರ ಹಿಂದೇಟು, ಸ್ವದೇಶಿಯತ್ತ ಮೋದಿ ಚಿತ್ತ

Pinterest LinkedIn Tumblr

tejas-jets01ನವದೆಹಲಿ: ವಾಯುಸೇನೆಯ ಬಲ ಹೆಚ್ಚಿಸಲು ಹೆಚ್ಚುವರಿ ವಿದೇಶಿ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿರಸ್ಕರಿಸುವ ಸಾಧ್ಯತೆ ಇದ್ದು, ಸ್ವದೇಶಿ ನಿರ್ಮಿತ ಯುದ್ಧ ವಿಮಾನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಒಲವು ವ್ಯಕ್ತಪಡಿಸಿದೆ.

ಪ್ರಸ್ತುತ ವಾಯುಸೇನೆಯಲ್ಲಿ ಉಂಟಾಗಿರುವ ಕೊರತೆಯನ್ನು ನೀಗಿಸಲು ಫ್ರಾನ್ಸ್ ಮೂಲದ ಡಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ 36ರ ಬದಲಿಗೆ 44 ಯುದ್ಧ ವಿಮಾನಗಳನ್ನು ಖರೀದಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ವಾಯುಸೇನೆ ಈ ಹಿಂದೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ 36 ಯುದ್ಧ ವಿಮಾನಗಳನ್ನು ಖರೀದಿಸಲು ಮಾತ್ರ ಮುಂದಾಗಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ “ಮೇಕ್ ಇನ್ ಇಂಡಿಯಾ”ದ ಅಡಿಯಲ್ಲಿ ಭಾರತದಲ್ಲಿಯೇ ಯುದ್ಧ ವಿಮಾನಗಳನ್ನು ತಯಾರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ದೇಶೀಯ ಉಧ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರಮುಖವಾಗಿ ರಕ್ಷಣಾ ಇಲಾಖೆಯನ್ನು  ಇದರಲ್ಲಿ ಸೇರಿಸಬೇಕು ಎನ್ನುವುದು ಅವರ ಅಭಿಲಾಶೆಯಾಗಿದೆ. ಈ ಮೂಲಕ ಯುದ್ಧ ವಿಮಾನಗಳ ಖರೀದಿ ಮೂಲಕ ವಿದೇಶಕ್ಕೆ ಹೋಗುವ ಸಾವಿರಾರು ಕೋಟಿ ರು.ಗಳ ಆದಾಯವನ್ನು ದೇಶದಲ್ಲೇ ಉಳಿಸಿಕೊಳ್ಳಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ. ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರ ಫ್ರಾನ್ಸ್ ಮೂಲದ ಡಸಾಲ್ಟ್ ಏವಿಯೇಷನ್ ಗೆ ನುಂಗಲಾರದ ತುತ್ತಾಗಿ  ಪರಿಣಮಿಸಿದ್ದು, ಭಾರತಕ್ಕೆ ತನ್ನ ಯುದ್ಧ ವಿಮಾನಗಳನ್ನು ಮಾರಾಟ ಮಾಡಬೇಕು ಎಂಬ ಅದರ ಆಸೆಗೆ ಹಿನ್ನಡೆಯಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ವಾಯುಸೇನೆ ಪ್ರಸ್ತಾಪಿಸಿರುವಂತೆ 44 ಯುದ್ಧ ವಿಮಾನಗಳನ್ನು ಖರೀದಿಸುವಷ್ಟು ಹಣ  ವಾಯುಸೇನೆಯ ಬಳಿ ಇಲ್ಲ. ಹೀಗಾಗಿ ತಂತ್ರಜ್ಞಾನದ ಆಧುನೀಕರಣಗೊಂಡಿರುವ ದೇಶೀ ನಿರ್ಮಿತ ತೇಜಸ್ ಮಾರ್ಕ್ 1ಎ ಲಘು ಯುದ್ಧ ವಿಮಾನಗಳನ್ನು ತಯಾರಿಸಿ ಸೇನೆಗೆ ಸೇರ್ಪಡೆ  ಮಾಡುವ ಕುರಿತು ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.

Write A Comment