ವಾರಣಾಸಿ: ಲಾಠಿ ಚಾರ್ಜ್ ವಿರೋಧಿಸಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ಸ್ಥಳದಲ್ಲಿ ಕರ್ಫ್ಯೂ ಜಾರಿ ಮಾಡಿರುವುದಾಗಿ ಸೋಮವಾರ ತಿಳಿದುಬಂದಿದೆ.
ಸೆಪ್ಟೆಂಬರ್ 22ರಂದು ವಾರಣಾಸಿಯಲ್ಲಿ ಧಾರ್ಮಿಕ ನಾಯಕರು ಮತ್ತು ಅವರ ಅನುಯಾಯಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಪೊಲೀಸರ ಈ ದೌರ್ಜನ್ಯವನ್ನು ವಿರೋಧಿಸಿದ ಧಾರ್ಮಿಕ ನಾಯಕರು ಇಂದು ಮಧ್ಯಾಹ್ನದಿಂದ ವಾರಣಾಸಿಯಲ್ಲಿ ಕಾಲ್ನಡಿಗೆ ಮೂಲಕ ಪ್ರತಿಭಟನೆಗಿಳಿದಿದ್ದರು. ಧಾರ್ಮಿಕ ನಾಯಕ ಈ ಪ್ರತಿಭಟನೆಗೆ ಸ್ಥಳೀಯ ನಾಗರೀಕರು ಕೈ ಜೋಡಿಸಿದ್ದರು.
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಗಳು ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಉದ್ರಿಕ್ತರಾದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿಗಿಳಿದಿದ್ದಾರೆ. ಈ ವೇಳೆ ಕೆಲವು ಪ್ರತಿಭಟನಾಕಾರರು ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲವು ಘಂಟೆಗಳ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ಸ್ಥಳೀಯ ಪೊಲೀಸರು ದಶಾಶ್ವಮೇಧ, ಚೌಕ, ಕೊತ್ವಾಲಿ ಮತ್ತು ಲಕ್ಸಾ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.