ರಾಷ್ಟ್ರೀಯ

ಮಾನವಹಕ್ಕು ಉಲ್ಲಂಘನೆ: ಅಮೆರಿಕದ ‘ಲಂಕಾ’ ನಿರ್ಣಯಕ್ಕೆ ಬೆಂಬಲ ಬೇಡ: ಕರುಣಾನಿಧಿ

Pinterest LinkedIn Tumblr

KNNಚೆನ್ನೈ, ಸೆ.27: 2009ರಲ್ಲಿ ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ನಡೆಸಿದ ಸಂಘರ್ಷದ ಅಂತಿಮ ಹಂತದಲ್ಲಿ ನಡೆದಿದೆಯನ್ನಲಾದ ಮಾನವಹಕ್ಕು ಉಲ್ಲಂಘನೆಗಳ ಕುರಿತು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಅಮೆರಿಕವು ಮಂಡಿಸಲಿರುವ ನಿರ್ಣಯವು ತೀರಾ ‘ದುರ್ಬಲ’ವಾಗಿದ್ದು, ಅದನ್ನು ಭಾರತವು ಬೆಂಬಲಿಸಬಾರದೆಂದು ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ರವಿವಾರ ಆಗ್ರಹಿಸಿದ್ದಾರೆ.
ಅಮೆರಿಕವು ಮಂಡಿಸಲಿರುವ ನಿರ್ಣಯವು, ಎಲ್‌ಟಿಟಿಇ ವಿರುದ್ಧದ ಸಂಘರ್ಷದಲ್ಲಿ ನಡೆದ ಮಾನವಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಶ್ರೀಲಂಕಾ ಸರಕಾರವೇ ತನಿಖೆ ನಡೆಸುವುದನ್ನು ಬೆಂಬಲಿಸುತ್ತದೆ. ಆದರೆ ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆಯಾಗಬೇಕೆಂಬ ಬೇಡಿಕೆಯಿಂದ ಭಾರತವು ಹಿಂದೆ ಸರಿಯಕೂಡದೆಂದು ಅವರು ಹೇಳಿದ್ದಾರೆ.
‘‘ಅಮೆರಿಕ ಪ್ರಾಯೋಜಿತ ನಿರ್ಣಯವನ್ನು ಬೆಂಬಲಿಸುವುದೆಂದರೆ, ಯುದ್ಧಪರಾಧಗಳು ಹಾಗೂ ಮಾನವಹಕ್ಕು ಉಲ್ಲಂಘನೆಗಳಿಂದಾಗಿ ಸಂತ್ರಸ್ತರಾದ ತಮಿಳರಿಗೆ ನ್ಯಾಯದಾನದ ನಿರಾಕರಣೆಯಾಗಿದೆ’’ ಎಂದವರು ಪ್ರತಿಪಾದಿಸಿದ್ದಾರೆ ಹಾಗೂ ಭಾರತವು ಈ ವಿಷಯವನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕಾಗಿದೆ ಎಂದಿದ್ದಾರೆ.

ಮಾನವಹಕ್ಕು ಉಲ್ಲಂಘನೆಗಳ ಆರೋಪಗಳಿಗೆ ಸಂಬಂಧಿಸಿ, ಆಂತರಿಕ ಮಟ್ಟದಲ್ಲಿಯೇ ತನಿಖೆ ನಡೆಯಬೇಕೆಂಬ ಕೊಲಂಬೊದ ಬೇಡಿಕೆಯನ್ನು ಪ್ರಸ್ತಾಪಿಸಿದ ಕರುಣಾನಿಧಿ, ಆಂತರಿಕ ತನಿಖೆಯು ನಿಷ್ಪಕ್ಷಪಾತವಾಗಿರದು ಹಾಗೂ ತಟಸ್ಥ ಧೋರಣೆಯನ್ನು ಹೊಂದಿರದೆಂದು ಅಭಿಪ್ರಾಯಿಸಿದರು. ಅಮೆರಿಕವು ಆರಂಭದಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯಲ್ಲಿ ಮಂಡಿಸಿದ ತನ್ನ ಕರಡು ನಿರ್ಣಯದಲ್ಲಿ ಮಾನವಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ಶ್ರೀಲಂಕಾ ವಿರುದ್ಧ ಹಲವಾರು ಆರೋಪಗಳನ್ನು ಮಾಡಿತ್ತು. ಅದನ್ನು ಶ್ರೀಲಂಕಾ ವಿರೋಧಿಸಿತ್ತು. ಆನಂತರ ಉಭಯದೇಶಗಳ ಅಧಿಕಾರಿಗಳ ಜೊತೆ ಮಾತುಕತೆಗಳು ನಡೆದಿರುವುದಾಗಿ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ನಿರ್ಣಯದ ಅಂತಿಮ ಕರಡಿನಲ್ಲಿ ಅಮೆರಿಕವು, ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆಸುವ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ. ಈಗ ಅಮೆರಿಕವು ಯಾಕೆ ತನ್ನ ನಿಲುವನ್ನು ಬದಲಿಸಿದೆಯೆಂಬ ಪ್ರಶ್ನೆಯುದ್ಭವಿಸಿರುವುದಾಗಿ ಅವರು ತಿಳಿಸಿದರು. ಸೆಪ್ಟಂಬರ್ 30ರಂದು ಈ ವಿಷಯವನ್ನು ಚರ್ಚೆಗೆತ್ತಿಕೊಳ್ಳಲಿದ್ದು, ಅದಕ್ಕೂ ಮುನ್ನ ಕರಡು ನಿರ್ಣಯಕ್ಕೆ ಇನ್ನಷ್ಟು ತಿದ್ದುಪಡಿಯಾಗುವ ಸಾಧ್ಯತೆಯಿದೆಯೆಂದು ಕರುಣಾನಿಧಿ ಆತಂಕ ವ್ಯಕ್ತಪಡಿಸಿದರು. ಮಾನವಹಕ್ಕು ಉಲ್ಲಂಘನೆಗಳಿಗೆ ಸಂಬಂಧಿಸಿ ಶ್ರೀಲಂಕಾದ ಕರಡು ನಿರ್ಣಯವನ್ನು ಭಾರತವು ಬೆಂಬಲಿಸುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿರುವುದನ್ನು ಉಲ್ಲೇಖಿಸಿ ಕರುಣಾನಿಧಿ ಈ ಹೇಳಿಕೆ ನೀಡಿದ್ದಾರೆ.

Write A Comment