ರಾಷ್ಟ್ರೀಯ

ಶಾಸ್ತ್ರಿ ಸಾವಿನ ರಹಸ್ಯ ಬಹಿರಂಗಪಡಿಸಿ: ಕುಟುಂಬದ ಒತ್ತಾಯ

Pinterest LinkedIn Tumblr

Lal_ಹೊಸದಿಲ್ಲಿ, ಸೆ.26: ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಎಲ್ಲ ರಹಸ್ಯ ದಾಖಲೆಗಳನ್ನು ಬಹಿರಂಗಗೊಳಿಸ ಬೇಕೆಂದು ಶಾಸ್ತ್ರಿ ಕುಟುಂಬಿಕರು ಶನಿವಾರ ಒತ್ತಾಯಿಸಿದ್ದಾರೆ.
ನನ್ನ ತಂದೆಯ ಪಾರ್ಥಿವ ಶರೀರದ ಮೇಲೆ ನೀಲಿ ಮತ್ತು ಬಿಳಿಯ ಗುರುತುಗಳು ಕಂಡುಬಂದಿದ್ದವು. ಏನೋ ಮೋಸದಾಟದ ಸುಳಿವನ್ನು ಇವು ಸೂಚಿಸುತ್ತಿದ್ದವು ಎಂದು ಶಾಸ್ತ್ರಿಯವರ ಪುತ್ರ ಹಾಗೂ ಕಾಂಗ್ರೆಸ್ ಧುರೀಣ ಅನಿಲ್ ಶಾಸ್ತ್ರಿ ಹೇಳಿದ್ದಾರೆ.
‘ಏನೋ ಮೋಸದಾಟ ನಡೆದಿರಬಹುದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಆದರೆ, ಖಚಿತವಾಗಿ ಹಾಗೆಂದು ಹೇಳಲಾರೆ. ನಿರ್ಲಕ್ಷದಿಂದ ನಡೆದುಕೊಂಡಿರುವುದು ಮಾತ್ರ ಸ್ಪಷ್ಟ. ಇದರಲ್ಲಿ ಎಲ್ಲರೂ ನುಣುಚಿಕೊಂಡರು. ಯಾರಿಗೂ ಶಿಕ್ಷೆಯಾಗಲಿಲ್ಲ’ ಎಂದು ಅವರು ದೂರಿದ್ದಾರೆ.
ಅಂದು ಪ್ರಧಾನಿಯವರ ಜೊತೆಗೆ ಒಬ್ಬ ಅಡುಗೆಯಾಳು ಇದ್ದ. ಆತನನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು. ನನ್ನ ತಾಯಿ ತಾಷ್ಕೆಂಟ್‌ಗೆ ತೆರಳಿದ್ದಾಗ ಆತನನ್ನು ಭೇಟಿಯಾಗಲು ಬಯಸಿದ್ದರು. ಆದರೆ, ಆತನನ್ನು ಪತ್ತೆ ಮಾಡಲಾಗಲಿಲ್ಲ ಎಂದು ತಾಯಿಗೆ ತಿಳಿಸಲಾಗಿತ್ತು ಎಂದು ಅನಿಲ್ ಶಾಸ್ತ್ರಿ ತಿಳಿಸಿದ್ದಾರೆ.
ಶಾಸ್ತ್ರಿಯವರ ಖಾಸಗಿ ವೈದ್ಯ ಆರ್.ಎನ್.ಚುಗ್ ಮತ್ತು ಆಪ್ತ ಸಹಾಯಕ ಇಬ್ಬರೂ ಅಪಘಾತದಲ್ಲಿ ತೀರಿಕೊಂಡರು. ಇದೊಂದು ಆಘಾತಕಾರಿ ವಿಷಯವಾಗಿದೆ. ಅವರಿಬ್ಬರೂ ತನಿಖಾ ಆಯೋಗದ ಮುಂದೆ ಹಾಜರಾಗಬೇಕಿತ್ತು. ಎರಡೆರಡು ಬಾರಿ ಕಾಕತಾಳೀಯ ಘಟನೆಗಳು ಸಂಭವಿಸುವುದು ಬಹಳ ಅಪರೂಪ ಎಂದು ಅವರು ಹೇಳಿದ್ದಾರೆ.
ಶಾಸ್ತ್ರಿಯವರ ಖಾಸಗಿ ಡೈರಿ ಪತ್ತೆಯಾಗಲೇ ಇಲ್ಲ. ಅವರ ಡೈರಿ ಭಾರತಕ್ಕೆ ವಾಪಸ್ ಬರಲೇ ಇಲ್ಲ. ಪ್ರತಿದಿನವೂ ಅವರು ಟಿಪ್ಪಣಿಯನ್ನು ಮಾಡಿಕೊಳ್ಳುತ್ತಿದ್ದರು. ಅದರಲ್ಲಿ ತಾಷ್ಕೆಂಟ್ ಒಪ್ಪಂದದ ಕುರಿತು ಅವರು ಟಿಪ್ಪಣಿ ಮಾಡಿರುವ ಸಾಧ್ಯತೆಗಳಿದ್ದವು. ಅವರ ಬಳಿ ಇದ್ದ ಥರ್ಮೋಸ್ ಕೂಡ ವಾಪಸ್ ಬರಲಿಲ್ಲ. ಥರ್ಮೋಸ್ ಫಾಸ್ಕ್‌ನಲ್ಲಿದ್ದಿರಬಹುದಾದ ಯಾವುದೋ ವಸ್ತು ಅವರ ಸಾವಿಗೆ ಕಾರಣವಾಗಿರಬಹುದು ಎಂದು ಅವರು ನುಡಿದರು.
ನನ್ನ ತಂದೆಗೆ ಸಂಬಂಧಿಸಿದ ರಹಸ್ಯ ಕಡತಗಳ ಬಹಿರಂಗಕ್ಕೆ ಈ ಹಿಂದಿನ ಪ್ರಧಾನಿಗಳನ್ನು ನಾನು ಒತ್ತಾಯಿಸುತ್ತಲೇ ಬಂದಿದ್ದೇನೆ. ಮಾಜಿ ಪ್ರಧಾನಿ ಚಂದ್ರಶೇಖರ್, ಐ.ಕೆ.ಗುಜ್ರಾಲ್ ಮತ್ತು ಮನಮೋಹನ್ ಸಿಂಗ್ ಅವರನ್ನು ಈ ಸಂಬಂಧವಾಗಿ ಭೇಟಿಯಾಗಿದ್ದೇನೆ. ಆದರೆ, ನನಗೆ ಯಾವುದೇ ಉತ್ತರ ಲಭಿಸಲಿಲ್ಲ ಎಂದು ಶಾಸ್ತ್ರಿಯವರ ಇನ್ನೊರ್ವ ಪುತ್ರ ಹಾಗೂ ಬಿಜೆಪಿ ನಾಯಕ ಸುನೀಲ್ ಶಾಸ್ತ್ರಿ ತಿಳಿಸಿದ್ದಾರೆ.
ಶಾಸ್ತ್ರಿ ಕುಟುಂಬದ ಕೋರಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗೌರವಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಶಾಸ್ತ್ರಿಯವರ ಮೊಮ್ಮಗ ಹಾಗೂ ಬಿಜೆಪಿ ಧುರೀಣ ಸಿದ್ಧಾರ್ಥ್ ನಾಥ್ ಸಿಂಗ್ ಈ ಮಧ್ಯೆ ಹೇಳಿದ್ದಾರೆ.

Write A Comment