ರಾಷ್ಟ್ರೀಯ

ವಾಯುಪಡೆ ಮುಖ್ಯಸ್ಥ ಸಿಂಗ್‌ಗೆ ಸನ್ಮಾನ

Pinterest LinkedIn Tumblr

pranavನವದೆಹಲಿ (ಐಎಎನ್‌ಎಸ್‌): ಭಾರತ–ಪಾಕಿಸ್ತಾನ ನಡುವೆ 1965ರಲ್ಲಿ ನಡೆದ ಯುದ್ಧದ 50ನೇ ವರ್ಷಾಚರಣೆ ಪ್ರಯುಕ್ತ ಭಾರತೀಯ ಸಶಸ್ತ್ರ ಪಡೆಯ ಮುಖ್ಯಸ್ಥರನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಮಂಗಳವಾರ ಗೌರವಿಸಿದರು. ಯುದ್ಧದ ಸಂದರ್ಭದಲ್ಲಿ ವಾಯು ಪಡೆಯ ಮುಖ್ಯಸ್ಥರಾಗಿದ್ದ ಏರ್‌ ಮಾರ್ಷಲ್‌ ಅರ್ಜನ್‌ ಸಿಂಗ್‌ ಹಾಗೂ ಇತರ ಮೂವರನ್ನು ರಾಷ್ಟ್ರಪತಿ ಭವನದಲ್ಲಿ ನಡೆದ ಚುಟುಕು ಸಮಾರಂಭದಲ್ಲಿ ಪ್ರಣವ್‌ ಸನ್ಮಾನಿಸಿದರು.

ಯುದ್ಧದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಲ್ಲಿ ಈಗ ಬದುಕುಳಿದಿರುವವರು ಅರ್ಜನ್‌ ಸಿಂಗ್‌ ಒಬ್ಬರೇ. ತಮ್ಮ ಹೆಸರನ್ನು ಪ್ರಕಟಿಸುತ್ತಿದ್ದಂತೆ 90ರ ಸಿಂಗ್‌ ಅವರು ಎದೆ, ಬೆನ್ನು ಸೆಟೆಸಿ ಯುವ ಯೋಧನ ಶಿಸ್ತಿನಲ್ಲಿ ರಾಷ್ಟ್ರಪತಿಯವರ ಬಳಿ ಶಿಸ್ತಿನ ಹೆಜ್ಜೆಯಿರಿಸುತ್ತಾ ನಡೆದರು. ಸನ್ಮಾನ ಸ್ವೀಕರಿಸಿದ ಬಳಿಕ ನಿಧಾನವಾಗಿ ತಮ್ಮ ಆಸನದತ್ತ ಸಾಗಿದರು.

ಹವಾಲ್ದಾರ್‌ ಅಬ್ದುಲ್‌ ಹಮೀದ್‌, ಲೆಫ್ಟಿನೆಂಟ್‌ ಕರ್ನಲ್‌ ಆರ್ದಿಷೇರ್‌ ತಾರಾಪೋರ್‌ ಮತ್ತು ಬೆಂಕಿ ಅವಘಡಕ್ಕೆ ತುತ್ತಾಗಿದ್ದ ರೈಲು ಬೋಗಿಯನ್ನು ಇತರ ಬೋಗಿಗಳಿಂದ ಪ್ರತ್ಯೇಕಿಸುವ ಮೂಲಕ ಹಲವಾರು ಪ್ರಯಾಣಿಕರು ಹಾಗೂ ಬೃಹತ್‌ ಪ್ರಮಾಣದ ಸಾಮಗ್ರಿಗಳನ್ನು ರಕ್ಷಿಸಿದ್ದ ಚಮನ್‌ ಲಾಲ್‌ ಎಂಬ ರೈಲ್ವೇ ನೌಕರನನ್ನು ಈ ಸಂದರ್ಭದಲ್ಲಿ ಮರಣೋತ್ತರವಾಗಿ ಗೌರವಿಸಲಾಯಿತು. ಈ ಮೂವರ ಕುಟುಂಬದ ಸದಸ್ಯರು ಗೌರವ ಸ್ವೀಕರಿಸಿದರು.

Write A Comment