ರಾಷ್ಟ್ರೀಯ

ಮಹಾನದಿ ಮತ್ತು ಗೋದಾವರಿ ನದಿ ತಿರುವು ಯೋಜನೆಯಿಂದ ರಾಜ್ಯಕ್ಕೆ ನಷ್ಟ: ಕೇಂದ್ರಕ್ಕೆ ಪ್ರತಿಭಟನೆ ಸಲ್ಲಿಕೆ

Pinterest LinkedIn Tumblr

Mahandhiನವದೆಹಲಿ: ಮಹಾನದಿ ಮತ್ತು ಗೋದಾವರಿ ನದಿ ತಿರುವು ಯೋಜನೆಯಿಂದ ರಾಜ್ಯಕ್ಕೆ ಬರಬೇಕಾಗಿರುವ 283 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಪರಿಷ್ಕೃತ ಅಂದಾಜಿನಲ್ಲಿ ಖೋತಾ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಕರ್ನಾಟಕ ಸರ್ಕಾರ ಮಂಗಳವಾರ  ಪ್ರತಿಭಟನೆ ದಾಖಲಿಸಿದೆ.

ಅಂತರ್‌ ನದಿಗಳ ಜೋಡಣೆ ಯೋಜನೆ ಕುರಿತು ಚರ್ಚಿಸಲು ಮಂಗಳವಾರ ಜಲ ಸಂಪನ್ಮೂಲ ಸಚಿವಾಲಯ ಕರೆದಿದ್ದ ವಿವಿಧ ರಾಜ್ಯಗಳ 6ನೇ ಜಲ ಸಂಪನ್ಮೂಲ ಸಚಿವರ ಸಭೆಯಲ್ಲಿ ಕರ್ನಾಟಕ ಸರ್ಕಾರವು ಮೌಖಿಕ ಮತ್ತು  ಲಿಖಿತ ರೂಪದಲ್ಲಿ ಪ್ರತಿಭಟನೆ ದಾಖಲಿಸಿದೆ.

ದೂರಿಗೆ ಸ್ಪಂದಿಸಿದ ಸಚಿವೆ: ರಾಜ್ಯದ ಪ್ರತಿಭಟನೆಗೆ ಕಿವಿಗೊಟ್ಟ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, ಮಧ್ಯಾಹ್ನ ಪ್ರತ್ಯೇಕವಾಗಿ ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರ ಜತೆ ಮಾತುಕತೆ ನಡೆಸಿದರು. ಕರ್ನಾಟಕದ ಬೇಡಿಕೆ ಕುರಿತು ಪರಿಶೀಲಿಸುವ ಭರವಸೆ ನೀಡಿದರು.

ಮಹಾನದಿ ಹಾಗೂ ಗೋದಾವರಿ ನದಿ ತಿರುವು ಯೋಜನೆಯಿಂದ 1,300 ಟಿಎಂಸಿ ಅಡಿ ಹೆಚ್ಚುವರಿ ನೀರು ದೊರೆಯಲಿದೆ. ಇದರಲ್ಲಿ ರಾಜ್ಯದ ಪಾಲು 283 ಟಿಎಂಸಿ ಅಡಿ (196 ಟಿಎಂಸಿ ಅಡಿ ಕೃಷ್ಣಾ ನದಿ ಪಾತ್ರ ಮತ್ತು 87 ಟಿಎಂಸಿ ಅಡಿ ಕಾವೇರಿ ನದಿ ಪಾತ್ರ) ಎಂದು 1980ರಲ್ಲಿ ಅಂದಾಜಿಸಲಾಗಿತ್ತು. 2000ನೇ ವರ್ಷದಲ್ಲಿ ಮಾಡಲಾದ ಪರಿಷ್ಕೃತ ಅಂದಾಜಿನಂತೆ 925ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದ್ದು, ಈ ನೀರಿನಲ್ಲಿ ರಾಜ್ಯಕ್ಕೆ 164 ಟಿಎಂಸಿ ಅಡಿ  (ಕೃಷ್ಣಾ 107 ಟಿಎಂಸಿ ಅಡಿ, ಕಾವೇರಿ 57 ಟಿಎಂಸಿ ಅಡಿ) ಹಂಚಿಕೆ ಮಾಡಲಾಯಿತು.

ಆದರೆ, ಐದು ವರ್ಷದ ಹಿಂದೆ ಈ ನದಿಗಳ ತಿರುವು ಯೋಜನೆಯಿಂದ 718 ಟಿಎಂಸಿ ಅಡಿ ಹೆಚ್ಚುವರಿ ನೀರು ಲಭ್ಯವಾಗುವುದಾಗಿ ಅಂದಾಜಿಸಲಾಗಿದೆ. ಅದರಲ್ಲಿ ಕರ್ನಾಟಕದ ಪಾಲನ್ನು ಸಂಪೂರ್ಣ ಖೋತಾ ಮಾಡಲಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯುಡಿಎ) ಕೃಷ್ಣಾ, ಕಾವೇರಿ ನದಿ ಪಾತ್ರದ ಹೆಚ್ಚುವರಿ ನೀರು ಹಂಚಿಕೆ ಮಾಡುವಾಗ ಕರ್ನಾಟಕದ ಹಕ್ಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೇಂದ್ರದ ಗಮನಕ್ಕೆ ಬಾರದೆ ಈ ಅನ್ಯಾಯವಾಗಲು ಸಾಧ್ಯವಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ, ಕೃಷ್ಣಾ ನದಿ ಪಾತ್ರದಲ್ಲಿ ಬಂಜರು ಮತ್ತು ಬರ ಭೂಮಿ ಪ್ರದೇಶ ಹೊಂದಿದೆ. ಕಾವೇರಿ ಪಾತ್ರದಲ್ಲೂ ದೊಡ್ಡ ಪ್ರಮಾಣದಲ್ಲಿ ಬರ ಪೀಡಿತ ಪ್ರದೇಶವಿದೆ. ಜಲ ಅಭಿವೃದ್ಧಿ ಸಂಸ್ಥೆ ಈ ಅಂಶಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದೂ ಸಚಿವರು ವಿವರಿಸಿದರು.

ಜಲ ನ್ಯಾಯಮಂಡಳಿಗಳು ಈಗಾಗಲೇ ಆಂಧ್ರ ಹಾಗೂ ತಮಿಳುನಾಡಿಗೆ ಅಧಿಕ ನೀರು ಹಂಚಿಕೆ ಮಾಡಿದ್ದರೂ ಹೆಚ್ಚುವರಿ ನೀರಿನಲ್ಲಿ ದೊಡ್ಡ ಪಾಲನ್ನು ಎರಡೂ ರಾಜ್ಯಗಳಿಗೆ ನಿಗದಿಪಡಿಸಲಾಗಿದೆ ಎಂದೂ ಜಲ ಸಂಪನ್ಮೂಲ ಸಚಿವರು ಆರೋಪಿಸಿದರು.

ನದಿ ತಿರುವು ಯೋಜನೆಯಿಂದ ಲಭ್ಯವಾಗುವ ಹೆಚ್ಚುವರಿ ನೀರನ್ನು ಜಲನ್ಯಾಯಮಂಡಳಿಗಳ ಪ್ರತಿಪಾದನೆಯಂತೆ ಸಮಾನ ತತ್ವದ ಆಧಾರದ ಮೇಲೆ ಹಂಚಬೇಕು. ಕೃಷಿ ಯೋಗ್ಯ ಪ್ರದೇಶ, ನೀರಾವರಿ ಪ್ರದೇಶ, ಕುಡಿಯುವ ನೀರು ಹಾಗೂ ಪರಿಸರದ ಅಗತ್ಯ ಗಮನದಲ್ಲಿಟ್ಟುಕೊಳ್ಳಬೇಕು ಎಂದೂ ಪಾಟೀಲ ಆಗ್ರಹಿಸಿದರು.

ಕರ್ನಾಟಕ ನದಿ ಜೋಡಣೆ ಯೋಜನೆ ಬೆಂಬಲಿಸಲಿದೆ. ಆದರೆ, ಜಲ ಅಭಿವೃದ್ಧಿ ಸಂಸ್ಥೆ ವಿಶೇಷ ಸಮಿತಿ ಮೂಲಕ ಸಿದ್ಧಪಡಿಸುತ್ತಿರುವ ಸಮಗ್ರ ಯೋಜನಾ ವರದಿಯಲ್ಲಿ ರಾಜ್ಯದ ಆತಂಕಗಳನ್ನು ನಿವಾರಿಸುವ ಕೆಲಸ ಮಾಡಿಲ್ಲ ಎಂದು ಎಂ.ಬಿ. ಪಾಟೀಲ ದೂರಿದರು.

ಕೃಷ್ಣಾ ನ್ಯಾಯಮಂಡಳಿ ಅಂತಿಮ ತೀರ್ಪು, ಕೃಷ್ಣಾ ಹೆಚ್ಚುವರಿ ನೀರು ಹಂಚಿಕೆ 2050ರ ಮೇ ಅಂತ್ಯಕ್ಕೆ ಪುನರ್‌ ಪರಿಶೀಲನೆಗೆ ಒಳಪಡುವುದರಿಂದ ಆಲಮಟ್ಟಿ–ಪೆನ್ನಾರ್‌ ನದಿಗಳನ್ನು ನದಿ ಜೋಡಣೆ ಯೋಜನೆಯಿಂದ ಹೊರಗೆ ಇಡಬೇಕು. ತಮಿಳುನಾಡಿನ ಪೊನೈಯಾರ್‌ ಮತ್ತು ಪಾಲಾರ್ ನದಿ ಜೋಡಣೆ ಕಾರ್ಯಸಾಧುವೇ ಎಂಬ ಬಗ್ಗೆ ಜಲ ಅಭಿವೃದ್ಧಿ ಸಂಸ್ಥೆ ಅಧ್ಯಯನ ನಡೆಸಬೇಕು ಎಂದೂ ಸಚಿವರು ಒತ್ತಾಯಿಸಿದರು.

ಗೋದಾವರಿ–ಕೃಷ್ಣಾ ನದಿ ಜೋಡಣೆಗೆ ಕ್ಷಣಗಣನೆ
ಹೈದರಾಬಾದ್: ಆಂಧ್ರ ಪ್ರದೇಶದ ದಶಕಗಳ ಮಹತ್ವಾಕಾಂಕ್ಷೆಯ ಗೋದಾವರಿ ಹಾಗೂ ಕೃಷ್ಣಾ  ನದಿ ಜೋಡಣೆಯ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ.

ಕಳೆದ ವಾರ ಗೋದಾವರಿಯ ನದಿ ಯಿಂದ ಹರಿಬಿಡಲಾದ 600 ಕ್ಯೂಸೆಕ್‌್ ನೀರು ಬುಧವಾರ ಕೃಷ್ಣಾ ನದಿಯನ್ನು ಸೇರಲಿದೆ.
ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು, ಸಂಪುಟ ಸದಸ್ಯರು ಹಾಗೂ 13 ಜಿಲ್ಲೆಗಳ ಸಾವಿರಾರು ರೈತರು ಈ ಐತಿಹಾಸಿಕ ಕ್ಷಣಕ್ಕೆ  ಸಾಕ್ಷಿಯಾಗಲಿದ್ದಾರೆ.

ಪೋಲಾವರಂ ಬಲದಂಡೆ ಕಾಲುವೆಹಾಗೂ ಪಟ್ಟಿಸೀಮಾ ಏತ ನೀರಾವರಿ ಕಾಲುವೆಯಿಂದ ವಿಜಯವಾಡ ಬಳಿಯ ಪ್ರಕಾಶಂ ಬ್ಯಾರೇಜ್‌ ಮೂಲಕ ಹರಿದು ಗೋದಾವರಿ ನೀರು  ಕೃಷ್ಣಾ ನದಿಯನ್ನು ಸೇರಲಿದೆ.

ಪ್ರತಿವರ್ಷ ಸಾಗರ ಸೇರಿ ಪೋಲಾಗುವ ಸುಮಾರು ಮೂರು ಸಾವಿರ ಟಿಎಂಸಿ ಗೋದಾವರಿ ನದಿ ನೀರನ್ನು ಬಳಸಿಕೊಳ್ಳಲು ಆಂಧ್ರ ಸರ್ಕಾರ, ಗೋದಾವರಿ–ಕೃಷ್ಣಾ ನದಿ ಜೋಡಣೆಗೆ  ಮುಂದಾಗಿತ್ತು.

ಆ ಪೈಕಿ 80 ಟಿಎಂಸಿ ಗೋದಾವರಿ ನೀರನ್ನು ಕೃಷ್ಣಾ ನದಿ ಪಾತ್ರದ ರಾಯಲಸೀಮಾ ಜನರ ಕೃಷಿ ಮತ್ತು ಕುಡಿಯುವ ನೀರಿನ ಬವಣೆ ತಪ್ಪಿಸಲು ಬಳಸಿಕೊಳ್ಳಲಿದೆ.

Write A Comment