ರಾಷ್ಟ್ರೀಯ

ತೀವ್ರಗೊಂಡ ಮೀಸಲಾತಿ ಪ್ರತಿಭಟನೆ: ಪಟೇಲರಿಂದ ಬ್ಯಾಂಕ್ ಹಣ ಹಿಂಪಡೆಯುವ ಚಳವಳಿ

Pinterest LinkedIn Tumblr

370882-pti-hardik-patel

ಅಹ್ಮದಾಬಾದ್,ಸೆ.9:ಮೀಸಲಾತಿಗೆ ಆಗ್ರಹಿಸಿ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಗುಜರಾತ್‌ನ ಪಟೇಲ್ ಸಮುದಾಯದ ನಾಯಕರು, ತಮ್ಮ ಬೇಡಿಕೆಗಳ ಈಡೇರಿಕೆಗೆ ‘ ಆರ್ಥಿಕ ಅಸಹಕಾರ ಚಳವಳಿ’ಗೆ ಮುಂದಾಗಿದ್ದು, ರಾಜ್ಯಾದ್ಯಂತದ ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟಿರುವ ಹಣವನ್ನು ಹಿಂದೆಗೆದುಕೊಳ್ಳುವಂತೆ ಸಮುದಾಯದ ಸದಸ್ಯರಿಗೆ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯನ್ನು ಬಹಿಷ್ಕರಿಸುವುದಾಗಿ ಆ ದೇಶದಲ್ಲಿ ನೆಲೆಸಿರುವ ಪಟೇಲ್ ಸಮುದಾಯದ ನಾಯಕರು ಘೋಷಿಸಿದ ಬೆನ್ನಲ್ಲೇ, ಗುಜರಾತ್‌ನಲ್ಲಿ ಪಟೇಲರ ಓಬಿಸಿ ಚಳವಳಿಯ ನೇತೃತ್ವ ವಹಿಸಿರುವ ‘ಸರ್ದಾರ್ ಪಟೇಲ್ ಗ್ರೂಪ್’(ಎಸ್‌ಪಿಜಿ) ಅರ್ಥಿಕ ಅಸಹಕಾರ ಚಳವಳಿ ಆರಂಭಿಸುವುದಾಗಿ ತಿಳಿಸಿದೆ.

‘‘ಮೀಸಲಾತಿ ಕುರಿತ ನಮ್ಮ ಬೇಡಿಕೆಗಳಿಗೆ ರಾಜ್ಯ ಸರಕಾರವು ಕಿವುಡಾಗಿದೆ. ಹೀಗಾಗಿ ಬ್ಯಾಂಕ್‌ಗಳಿಂದ ಹಣವನ್ನು ಹಿಂದೆಗೆದುಕೊಳ್ಳುವಂತೆ ನಾವು ಪಟೇಲ್ ಸಮುದಾಯದ ಸದಸ್ಯರಿಗೆ ಮನವಿ ಮಾಡುತ್ತೇವೆ’’ ಎಂದು ಸರ್ದಾರ್ ಪಟೇಲ್ ಗ್ರೂಪ್ (ಎಸ್‌ಪಿಜಿ)ನ ವಕ್ತಾರ ವರುಣ್ ಪಟೇಲ್ ತಿಳಿಸಿದ್ದಾರೆ.

‘‘ನಮಗೆ ತಿಳಿದಿರುವ ಪ್ರಕಾರ, ಗುಜರಾತ್‌ನಲ್ಲಿ ಪಟೇಲ್ ಸಮುದಾಯದ ಸದಸ್ಯರು 70 ಲಕ್ಷ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಪ್ರತಿಯೊಂದರಲ್ಲಿಯೂ ಕನಿಷ್ಠ 50 ಸಾವಿರ ರೂ. ಠೇವಣಿಯಿದೆ.ಅಂದರೆ, ನಮ್ಮ ಸಮುದಾಯವು ರಾಜ್ಯದ ಬ್ಯಾಂಕ್‌ಗಳಲ್ಲಿ 350 ಕೋಟಿ ರೂ. ಠೇವಣಿಯಿಟ್ಟಿದೆ’’ ಎಂದವರು ತಿಳಿಸಿದ್ದಾರೆ. ಸಮುದಾಯದ ಸದಸ್ಯರು ಖಂಡಿತವಾಗಿಯೂ ಈ ಬೇಡಿಕೆಗೆ ಓಗೊಡುತ್ತಾರೆಂಬ ಆತ್ಮವಿಶ್ವಾಸವನ್ನು ವರುಣ್ ಪಟೇಲ್ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲವರು ಬ್ಯಾಂಕ್‌ಗಳಿಂದ ಹಣವನ್ನು ಹಿಂದೆಗೆದುಕೊಳ್ಳಲಾರಂಭಿಸಿದ್ದಾರೆಂದು ಅವರು ತಿಳಿಸಿದರು.

ಆದಾಗ್ಯೂ, ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟ ಹಣವನ್ನು ಹಿಂಪಡೆಯಬೇಕೆಂಬ ಮನವಿಗೆ ಗುಜರಾತ್ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿಯ ಹಿರಿಯ ಉಪಾಧ್ಯಕ್ಷ ಬಿಪಿನ್ ಪಟೇಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಅದೊಂದು ಮೂರ್ಖ ನಿರ್ಧಾರವೆಂದು ಅವರು ಬಣ್ಣಿಸಿದ್ದಾರೆ.

ಏತನ್ಮಧ್ಯೆ ಎಸ್‌ಪಿಜಿ ನಾಯಕ ಲಾಲ್‌ಜಿ ಪಟೇಲ್ ಹೇಳಿಕೆಯೊಂದನ್ನು ನೀಡಿ, ಗುಜರಾತ್‌ನಲ್ಲಿ ತಮ್ಮ ಸಮದಾಯದ ಬಾಂಧವರು ನಡೆಸುತ್ತಿರುವ ಮೀಸಲಾತಿ ಚಳವಳಿಯನ್ನು ಬೆಂಬಲಿಸಿ ಅಮೆರಿಕದ ನ್ಯೂಜೆರ್ಸಿ ಸಂಸ್ಥಾನದ ಎಡಿಸನ್ ಟೌನ್‌ನಲ್ಲಿ ಮಂಗಳವಾರ ಒಂದು ಸಾವಿರಕ್ಕೂ ಅಧಿಕ ಪಟೇಲರು ಸಭೆಯನ್ನು ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮುಂಬರುವ ಅಮೆರಿಕ ಭೇಟಿಯನ್ನು ಬಹಿಷ್ಕರಿಸಲು ಅವರು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ. ಗುಜರಾತ್‌ನಲ್ಲಿರುವ ತಮ್ಮ ಸಮುದಾಯದವರು ಸರಕಾರಕ್ಕೆ ತೆರಿಗೆ ಪಾವತಿಸುವುದನ್ನು ನಿಲ್ಲಿಸುವಂತೆಯೂ ಅಮೆರಿಕದಲ್ಲಿ ನೆಲೆಸಿರುವ ಪಟೇಲರು ಕರೆ ನೀಡಿದ್ದಾರೆ.ತಮ್ಮ ಬೇಡಿಕೆ ಈಡೇರುವವರೆಗೆ ಗುಜರಾತ್ ಸರಕಾರದ ಯಾವುದೇ ಕಾರ್ಯಕ್ರಮಗಳಿಂದ ಪಟೇಲರು ದೂರವುಳಿಯಲಿದ್ದಾರೆಂದು ಲಾಲ್‌ಜಿ ಘೋಷಿಸಿದ್ದಾರೆ.

ಆಗಸ್ಟ್ 25ರ ಪ್ರತಿಭಟನೆಯ ಬಳಿಕ ಎಸ್‌ಪಿಜಿಯು, ಹಾರ್ದಿಕ್ ಪಟೇಲ್ ನೇತೃತ್ವದ ‘ಮೀಸಲಾತಿ ಆಂದೋಲನ ಸಮಿತಿ’ ಜೊತೆ ಸಂಬಂಧವನ್ನು ಕಡಿದುಕೊಂಡಿದೆ ಹಾಗೂ ಅದು ಪ್ರತ್ಯೇಕವಾಗಿ ಮೀಸಲಾತಿ ಚಳವಳಿಯನ್ನು ನಡೆಸುತ್ತಿದೆ.

Write A Comment