ಅಂತರಾಷ್ಟ್ರೀಯ

ನಿಮ್ಮ ವೈವಾಹಿಕ ಬಾಂಧವ್ಯವನ್ನು ಉಳಿಸಬೇಕೆಂದಿದ್ದರೆ ‘ಫೇಸ್ ಬುಕ್’ ನಿಂದ ಸಂಗಾತಿಯನ್ನು ಕಿತ್ತು ಹಾಕಿ..!

Pinterest LinkedIn Tumblr

husband-wife-fight (1)

ನ್ಯೂಯಾರ್ಕ್: ನಿಮ್ಮ ವೈವಾಹಿಕ ಬಾಂಧವ್ಯವನ್ನು ಉಳಿಸಬೇಕೆಂದು ಇದ್ದೀರೋ? ಹಾಗಾದರೆ ನಿಮ್ಮ ಸಂಗಾತಿಯನ್ನು ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ನಿಂದ ಕಿತ್ತು ಹಾಕಿ ಎಂದು ನ್ಯೂಯಾರ್ಕ್ ಮೂಲದ ಚಿಕಿತ್ಸಕರೊಬ್ಬರು ಸಲಹೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮವು ಬಾಂಧವ್ಯಗಳಿಗೆ ಹಾನಿಕಾರಕ ಎಂದು ಅವರು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ನಿಂದ ಪರಸ್ಪರ ಕಿತ್ತು ಹಾಕಿದ ದಂಪತಿ ಹೆಚ್ಚು ಕಾಲ ಒಟ್ಟಾಗಿರುವ ಸಾಧ್ಯತೆಗಳಿವೆ ಎಂದು ಬಾಂಧವ್ಯ ತಜ್ಞ ಇವಾನ್ ಖೆರ್ನರ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ನಿಮ್ಮ ಸಂಗಾತಿಯನ್ನು ಕಿತ್ತು ಹಾಕುವುದರಿಂದ ನಿಮ್ಮ ಬಾಂಧವ್ಯವನ್ನು ಮೊದಲಿನಂತೆಯೇ ಬಲ ಪಡಿಸಬಹುದು ಎಂಬುದೂ ಮಹತ್ವಪೂರ್ಣ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಂಗಾತಿಯೊಂದಿಗೆ ಕಳೆಯಲು ಹೆಚ್ಚು ಸಮಯ ಬೇಕಿದ್ದರೆ, ಜನರು ಫೇಸ್ ಬುಕ್ ಖಾತೆಯನ್ನೇ ಸಂಪೂರ್ಣ ಕಿತ್ತುಹಾಕುವುದು ಒಳ್ಳೆಯದು ಎಂದೂ ಅವರು ಸಲಹೆ ಮಾಡಿದ್ದಾರೆ. ಮೊಬೈಲ್ ಫೋನ್​ಗಳನ್ನು ಹೆಚ್ಚು ಬಳಕೆ ಮಾಡುವುದು ಎಂದರೆ ದಂಪತಿ ಪರಸ್ಪರ ಮುಖಾಮುಖಿ ಮಾತುಕತೆಯನ್ನು ಕಡಿಮೆ ಮಾಡುತ್ತಿದ್ದಾರೆ ಎಂದೇ ಅರ್ಥ. ಇಂತಹ ಪ್ರವೃತ್ತಿ ಅಪಾರ್ಥ ಮತ್ತು ವಾಗ್ವಾದಗಳಿಗೆ ಕಾರಣವಾಗುತ್ತದೆ ಎಂದು ಇವಾನ್ ಹೇಳಿದ್ದಾರೆ.

ಪ್ಯೂ ರೀಸರ್ಚ್ ಸೆಂಟರ್ ನಡೆಸಿರುವ ಅಧ್ಯಯನದ ಪ್ರಕಾರ ಶೇಕಡಾ 25ರಷ್ಟು ವಿವಾಹಿತ ಜೋಡಿಗಳು ತಾವು ಒಟ್ಟಿಗೇ ಮನೆಗೆ ಹೋಗುವಾಗಲೂ ಪರಸ್ಪರ ಮೊಬೈಲ್ ಸಂದೇಶ ರವಾನೆಯಲ್ಲಿಯೇ ಇರುತ್ತಾರೆ.! ಇಷ್ಟೇ ಸಂಖ್ಯೆಯ ಮಂದಿ ತಮ್ಮ ಸಂಗಾತಿ ತಮ್ಮ ಮೊಬೈಲ್​ನಲ್ಲೇ ವ್ಯಸ್ತರಾಗಿರುತ್ತಾರೆ ಎಂದು ದೂರಿದ್ದಾರೆ. ಶೇಕಡಾ 8ರಷ್ಟು ಮಂದಿ ಸಂಗಾತಿ ಅಂತರ್ಜಾಲದಲ್ಲಿ ಎಷ್ಟೊಂದು ಸಮಯ ಕಳೆಯುತ್ತಾರೆ ಎಂಬ ಕ್ಯಾತೆ ತೆಗೆದು ಕಿತ್ತಾಡಿದ್ದಾರೆ.

ಸಾಮಾಜಿಕ ಜಾಲತಾಣದಿಂದಾಗಿ ತಮ್ಮ ಸ್ವಂತ ಬಾಂಧವ್ಯಕ್ಕೂ ಧಕ್ಕೆ ಉಂಟಾಗಿತ್ತು ಎಂದು ಹೇಳಿರುವ ಕೆರ್ನರ್ ಇದೀಗ ತಮ್ಮ ಫೇಸ್ ಬುಕ್ ಖಾತೆಯನ್ನೇ ಕಿತ್ತು ಹಾಕಿದ್ದಾರೆ.

Write A Comment