ನವದೆಹಲಿ: ದೆಹಲಿ ವಿಮಾನನಿಲ್ದಾಣದ ಮೂರು ವಿಮಾನಗಳಲ್ಲಿ ಬಾಂಬ್ ಇರುವುದಾಗಿ ಶುಕ್ರವಾರ ರಾತ್ರಿ ಬೆದರಿಕೆ ಕರೆ ಬಂದಿದ್ದರಿಂದ ವಿಮಾನನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಬೇಕಿದ್ದ ಮೂರು ವಿಮಾನಗಳಲ್ಲಿ ಬಾಂಬ್ ಇರುವುದಾಗಿ ಗುರಗಾಂವ್ ಕರೆ ಸ್ವೀಕರಣಾ ಕೇಂದ್ರಕ್ಕೆ ತಡರಾತ್ರಿ 1.30ಕ್ಕೆ ಬೆದರಿಕೆ ಕರೆ ಬಂದ ಬೆನ್ನಲ್ಲೇ ತೀವ್ರ ತಪಾಸಣೆ ನಡೆಸಲಾಗಿದೆ.
ಜೆಟ್ ಏರ್‌ವೇಸ್ ಹಾಗೂ ಕ್ಯಾಥೆ ಪೆಸಿಫಿಕ್ ಗೆ ಸೇರಿದ ಎರಡು ವಿಮಾನಗಳು ಹಾಗೂ ಸ್ವಿಸ್ ಏರ್‌ವೇಸ್ ವಿಮಾನದಲ್ಲಿ ಬಾಂಬ್ ಇರುವುದಾಗಿ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿದ್ದಾರೆ.
ಬಾಂಬ್ ಬೆದರಿಕೆ ಕರೆ ಬರುವ ವೇಳೆಗೆ ಜೆಟ್ ಏರ್‌ವೇಸ್ ಹಾಗೂ ಕ್ಯಾಥೆ ಪೆಸಿಫಿಕ್ ಗೆ ಸೇರಿದ ಈ ಎರಡೂ ವಿಮಾನಗಳು ಪ್ರಯಾಣ ಬೆಳೆಸಿದ್ದವು. ಇನ್ನಷ್ಟೇ ಪ್ರಯಾಣ ಆರಂಭಿಸಬೇಕಿದ್ದ ಸ್ವಿಸ್ ಏರ್‌ವೇಸ್ ವಿಮಾನ ತಪಾಸಣೆ ನಡೆಸಿದ ಬಳಿಕ ಪ್ರಯಾಣ ಬೆಳೆಸಿದೆ.
ಜೆಟ್ ಏರ್‌ವೇಸ್ ವಿಮಾನ ತಡರಾತ್ರಿ 1.27ಕ್ಕೆ ಹಾಂಕಾಂಗ್‌ಗೆ ಪ್ರಯಾಣಿಸಿತ್ತು. ಬೆದರಿಕೆ ಕರೆ ಬಂದ ಬೆನ್ನಲ್ಲೇ 12ಮಂದಿ ಸಿಬ್ಬಂದಿ ಹಾಗೂ 194 ಪ್ರಯಾಣಿಕರಿದ್ದ ಈ ವಿಮಾನವನ್ನು ದೆಹಲಿಗೆ ವಾಪಸ್ ಕರೆಯಿಸಿಕೊಂಡು ತಪಾಸಣೆ ನಡೆಸಲಾಗಿದೆ. ಕ್ಯಾಥೆ ಪೆಸಿಫಿಕ್ ಗೆ ಸೇರಿದ ವಿಮಾನವನ್ನೂ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
