ರಾಷ್ಟ್ರೀಯ

ವಾಣಿಜ್ಯ ವಿವಾದಗಳು ಮತ್ತು ವಾಣಿಜ್ಯ ನ್ಯಾಯಾಲಯಗಳ ಮಸೂದೆ ವಿಳಂಬ: ಸಚಿವ ಡಿವಿ ಜೊತೆ ಅಮೆರಿಕ ರಾಯಭಾರಿ ಚರ್ಚೆ ಸಂಭವ

Pinterest LinkedIn Tumblr

dvಹೊಸದಿಲ್ಲಿ, ಸೆ.1: ವಾಣಿಜ್ಯ ವಿವಾದಗಳು ಮತ್ತು ವಾಣಿಜ್ಯ ನ್ಯಾಯಾಲಯಗಳ ಮಸೂದೆಯು ಸಂಸದೀಯ ಸಮಿತಿಯೊಂದರ ಮುಂದೆ ಬಾಕಿ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.

ಕೇಂದ್ರ ಸಚಿವರೊಂದಿಗೆ ಇದೇ ವಾರದಲ್ಲಿ ಭೇಟಿಗೆ ವರ್ಮಾ ಸಮಯಾವಕಾಶವನ್ನು ಕೋರಿದ್ದಾರೆ. ಸಂಸತ್ತಿನ ಒಪ್ಪಿಗೆಗೆ ಬಾಕಿ ಉಳಿದುಕೊಂಡಿರುವ ಮಸೂದೆಯೂ ಸೇರಿದಂತೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದರ ಕುರಿತಂತೆ ಅವರು ಮಾತುಕತೆ ನಡೆಸುವ ಸಂಭವವಿದೆ ಎಂದು ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ.

ಕಾರ್ಪೊರೇಟ್ ಸಂಸ್ಥೆಗಳ ನಡುವಿನ ವಾಣಿಜ್ಯ ವಿವಾದಗಳ ತ್ವರಿತ ಇತ್ಯರ್ಥಕ್ಕಾಗಿ ‘ಆರ್ಬಿಟ್ರೇಶನ್ ಆ್ಯಂಡ್ ಕನ್ಸಿಲೇಶನ್ ಕಾಯ್ದೆ’ಗೆ (1996) ತಿದ್ದುಪಡಿ ತರುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಕಳೆದ ವಾರವೇ ಒಪ್ಪಿಗೆ ನೀಡಿದೆ. ಪ್ರಕರಣಗಳ ಇತ್ಯರ್ಥಕ್ಕೆ ನಿರ್ದಿಷ್ಟ ಸಮಯವನ್ನು ತಿದ್ದುಪಡಿಯಲ್ಲಿ ನಿಗದಿಪಡಿಸಲಾಗಿದೆ.

ಗರಿಷ್ಠ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಈ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗುತ್ತಿದೆ. ಆದರೆ, ಪ್ರಕರಣಗಳ ಇತ್ಯರ್ಥಕ್ಕೆ ದೀರ್ಘಾವಧಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪೆನಿಗಳು ಭಾರತದಲ್ಲಿ ವ್ಯವಹಾರ ನಡೆಸಲು ಉತ್ಸುಕತೆ ತೋರಿಸುತ್ತಿಲ್ಲ ಎನ್ನಲಾಗಿದೆ.

ವಾಣಿಜ್ಯ ನ್ಯಾಯಾಲಯಗಳ ಮಸೂದೆಯು ಆಯ್ದ ಹೈಕೋರ್ಟ್‌ಗಳಲ್ಲಿ ವಾಣಿಜ್ಯ ಪೀಠಗಳನ್ನು ಸ್ಥಾಪನೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದುಬಂದಿದೆ.

Write A Comment