ತಿರುವನಂತಪುರಂ, ಸೆ.1: ಪೌಲ್ ಮುತ್ತೂಟ್ ಕೊಲೆ ಪ್ರಕರಣದಲ್ಲಿ 13 ಮಂದಿ ಆರೋಪಿಗಳು ತಪ್ಪಿತಸ್ಥರೆಂದು ವಿಶೇಷ ಸಿಬಿಐ ನ್ಯಾಯಾಲಯವೊಂದು ಮಂಗಳವಾರ ತೀರ್ಪು ನೀಡಿದೆ.
ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಸಿಇಒ ಜಾರ್ಜ್ ಮುತ್ತೂಟ್ ಅವರ ಕೊನೆಯ ಪುತ್ರ ಪೌಲ್ ಅವರನ್ನು 2009ರ ಆಗಸ್ಟ್ 21ರಂದು ಕೇರಳದ ಅಲಪ್ಪುಳದಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.
ಪ್ರಕರಣದ ಮುಖ್ಯ ಆರೋಪಿಗಳಾದ ಕರಿ ಸತೀಶ್ ಮತ್ತು ಜಯಚಂದ್ರನ್ ಸೇರಿದಂತೆ ಒಂಬತ್ತು ಮಂದಿಗೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಉಳಿದ ನಾಲ್ವರಿಗೆ ಮೂರುವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ. 14ನೆ ಆರೋಪಿ ಅನೀಶ್ ಅವರನ್ನು ನ್ಯಾಯಾಲಯವು ಖುಲಾಸೆ ಮಾಡಿದೆ.
ರಸ್ತೆಯಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದ ಪ್ರಕರಣವಿದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಕೊಲೆಯ ಹಿಂದೆ ರಾಜಕೀಯ ಸಂಚು ಇತ್ತೆಂದು ನಂತರದ ದಿನಗಳಲ್ಲಿ ಆರೋಪಿಸಲಾಗಿತ್ತು. ಆದರೆ, ಆರೋಪಿಗಳ ಬೈಕ್ಗೆ ಪೌಲ್ ಅವರ ಎಸ್ಯುವಿ ವಾಹನ ಗುದ್ದಿದ ಹಿನ್ನೆಲೆಯಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಕರಿ ಸತೀಶ್ ಎಂಬಾತ ಪೌಲ್ಗೆ ಚೂರಿಯಿಂದ ಇರಿದ ಪರಿಣಾಮವಾಗಿ ಪೌಲ್ ಮೃತಪಟ್ಟಿದ್ದರು ಎಂಬುದು ಸಿಬಿಐ ತನಿಖೆಯಿಂದ ವ್ಯಕ್ತವಾಗಿದೆ.