ರಾಮ್ ಪುರ: ಉತ್ತರ ಪ್ರದೇಶ ಸಚಿವ ಆಜಂ ಖಾನ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ಗುಜರಾತ್ ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ಸಾಧ್ಯವಾಗದವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ತವರು ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ವಿಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಮುನ್ನಡೆಸಲು ಅಶಕ್ತರು ಎಂದು ಆಜಂ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಗುಜರಾತ್ ನಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮೀಸಲಾತಿಗಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸಿ ಮೋದಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಎಂದು ಆಜಂ ಖಾನ್ ಸವಾಲು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಳ ಸರದಾರ ಎಂದು ಟೀಕಿಸಿರುವ ಆಜಂ ಖಾನ್, 2 ಕೋಟಿ ಉದ್ಯೋಗ ಸೃಷ್ಟಿಸುವುದು ಹಾಗೂ ಕಪ್ಪು ಹಣ ವಾಪಸ್ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ಭರವಸೆ ನೀಡಿದ್ದರು. ಅಲ್ಲದೇ ಪ್ರತಿಯೊಬ್ಬರ ಖಾತೆಯಲ್ಲೂ 15 ಲಕ್ಷ ರೂ ಜಮಾ ಮಾಡುವುದಾಗಿ ಹೇಳಿದ್ದರು. ಈ ವರೆಗೂ ಅದೆಷ್ಟು ಭರವಸೆ ಈಡೇರಿದೆ ಎಂದು ಆಜಂ ಖಾನ್ ಪ್ರಶ್ನಿಸಿದ್ದಾರೆ.