ಹೊಸದಿಲ್ಲಿ, ಆ. 28: ಇನ್ನು 10 ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಪಾಕಿಸ್ತಾನ ಮೂರನೆ ಅತಿ ದೊಡ್ಡ ಪರಮಾಣು ಅಸ್ತ್ರಗಳ ಸಂಗ್ರಾಹಕ ದೇಶವಾಗುತ್ತದೆ ಎಂದು ಅಮೆರಿಕದ ಎರಡು ಪ್ರಮುಖ ಚಿಂತನಾ ವೇದಿಕೆಗಳು ವರದಿಯೊಂದರಲ್ಲಿ ಹೇಳಿವೆ. ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ರಶ್ಯಗಳು ಇರುತ್ತವೆ.
ಪಾಕಿಸ್ತಾನವು ಭಾರತಕ್ಕೆ ಹೆದರಿ ಪ್ರತಿ ವರ್ಷ ತನ್ನ ಪರಮಾಣು ಶಸ್ತ್ರಗಳ ಬತ್ತಳಿಕೆಗೆ 20 ಸಿಡಿತಲೆಗಳನ್ನು ಸೇರಿಸುತ್ತಾ ಹೋಗುತ್ತಿದೆ ಎಂದು ‘ಕ್ಯಾರ್ನಜೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಶನಲ್ ಪೀಸ್’ ಮತ್ತು ‘ಸ್ಟಿಮ್ಸನ್ ಸೆಂಟರ್’ ಸಂಸ್ಥೆಗಳ ವರದಿ ಹೇಳಿದೆ.
‘‘ಮುಂದಿನ ವರ್ಷಗಳಲ್ಲಿ ಪಾಕಿಸ್ತಾನದ ಪರಮಾಣು ಸಾಮರ್ಥ್ಯ ನಾಟಕೀಯವಾಗಿ ಹೆಚ್ಚಾಗಲಿದೆ. ಯಾಕೆಂದರೆ, ಅದು ಅತ್ಯಂತ ಸಂವರ್ಧಿತ ಯುರೇನಿಯಂನ ಬಹುದೊಡ್ಡ ಸಂಗ್ರಹವನ್ನು ಹೊಂದಿದ್ದು, ಅದನ್ನು ಪರಮಾಣು ಶಸ್ತ್ರಗಳ ಕ್ಷಿಪ್ರ ಉತ್ಪಾದನೆಗೆ ಬಳಸಬಹುದಾಗಿದೆ’’ ಎಂದು ವರದಿಯನ್ನು ಉಲ್ಲೇಖಿಸಿ ‘ವಾಶಿಂಗ್ಟನ್ ಪೋಸ್ಟ್’ ಹೇಳಿದೆ.
ಭಾರತದ ಬಳಿ ಅಗಾಧ ಪ್ಲುಟೋನಿಯಂ ಸಂಗ್ರಹವಿದೆ ಎಂದು ಹೇಳಿರುವ ವರದಿ, ಆ ಪೈಕಿ ಹೆಚ್ಚಿನ ಭಾಗವನ್ನು ಅದು ಪರಮಾಣು ವಿದ್ಯುತ್ ಉತ್ಪಾದನೆಗೆ ಬಳಸುತ್ತಿದೆ ಎಂದಿದೆ. ಮುಂದಿನ 5-10 ವರ್ಷಗಳಲ್ಲಿ ಪಾಕಿಸ್ತಾನದ ಬಳಿ 350 ಸಿಡಿತಲೆಗಳಿರಬಹುದು ಹಾಗೂ ಆ ಮೂಲಕ ಬ್ರಿಟನ್ ಮತ್ತು ಫ್ರಾನ್ಸ್‌ನ್ನು ಹಿಂದಿಕ್ಕಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.
ಅಂತರಾಷ್ಟ್ರೀಯ