ಕಟಕ್, ಆ.28: ಒಡಿಶಾದಲ್ಲಿ ಧರ್ಮ ಗುರುಗಳು ಮತ್ತು ಧಾರ್ಮಿಕ ಟ್ರಸ್ಟ್‌ಗಳ ಹಣಕಾಸು ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ವಿಶೇಷ ತನಿಖಾ ತಂಡವು (ಸಿಟ್) ನಿರ್ಧರಿಸಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ‘ಸಿಟ್’ನ ಉಪಾಧ್ಯಕ್ಷ ಅರಿಜಿತ್ ಪಸಾಯತ್ ಶುಕ್ರವಾರ ಇಲ್ಲಿ ಈ ಸಂಬಂಧವಾಗಿ ಸಭೆಯೊಂದನ್ನು ನಡೆಸಿದರು.
ಧಾರ್ಮಿಕದತ್ತಿ ಸಂಸ್ಥೆಗಳಿಗೆ ದಾನ ಹಾಗೂ ಅವುಗಳ ಬಳಕೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮೇ ತಿಂಗಳಲ್ಲಿ ಸಲ್ಲಿಸಿದ್ದ ತನ್ನ ಮೂರನೆ ವರದಿಯಲ್ಲಿ ‘ಸಿಟ್’ ಒತ್ತಿ ಹೇಳಿತ್ತು.
ಒಡಿಶಾದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಧರ್ಮ ಗುರುಗಳು, ಶ್ರೀಮಂತ ಆಶ್ರಮಗಳು, ದೇವಾಲಯಗಳು ಅಣಬೆಗಳಂತೆ ತಲೆಎತ್ತುತ್ತಿವೆ. ಇಂತಹ ನಕಲಿ ಗುರುಗಳ ವೈಭವೋಪೇತ ಜೀವನ ಶೈಲಿ, ಇಂತಹ ಟ್ರಸ್ಟ್‌ಗಳಿಗೆ ಹರಿದುಬರುತ್ತಿರುವ ಹಣದಿಂದಾಗಿ ‘ಸಿಟ್’ಗೆ ಈ ರಾಜ್ಯದ ಕಡೆ ಆಸಕ್ತಿ ಮೂಡಿದೆ. ಜೊತೆಗೆ, ಸಂತೋಷ್ ರೌಲ್ ಆಲಿಯಾಸ್ ಸಾರಥಿ ಬಾಬಾನ ಬಂಧನ ಹಾಗೂ ಅಲ್ಲಿ ಪತ್ತೆಯಾಗಿರುವ ಶ್ರೀಮಂತಿಕೆ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ರಾಜ್ಯವನ್ನು ಪ್ರಾಯೋಗಿಕ ಪ್ರಕರಣವಾಗಿ ಇಟ್ಟುಕೊಂಡು ವಿಚಾರಣೆ ನಡೆಸಲು ‘ಸಿಟ್’ ನಿರ್ಧರಿಸಿದೆ.
ಒಡಿಶಾದ ಗಣಿ ಹಗರಣ ಹಾಗೂ ಚಿಟ್ ಫಂಡ್‌ನ ಹಣಕಾಸು ಚಟುವಟಿಕೆಗಳ ಮೇಲೆ ‘ಸಿಟ್’ ತನಿಖೆ ನಡೆಸುತ್ತಿದೆ. ಈ ಸಂಬಂಧವಾಗಿ ರಾಜ್ಯದ ಒಡಿಶಾ ಗಣಿ ನಿಗಮ (ಒಎಂಸಿ), ಜಾರಿ ನಿರ್ದೇಶನಾಲಯ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ, ಆದಾಯ ಇಲಾಖೆಗಳ ಅಧಿಕಾರಿಗಳ ಜೊತೆಗೆ ನ್ಯಾ.ಪಸಾಯತ್ ಶುಕ್ರವಾರ ಇಲ್ಲಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಒಎಂಸಿಯಿಂದ ಸಾವಿರ ಪುಟಗಳ ದಾಖಲೆಗಳನ್ನು ‘ಸಿಟ್’ ಸಂಗ್ರಹಿಸಿದೆ.
ರಾಷ್ಟ್ರೀಯ