ನವದೆಹಲಿ: ಜಮ್ಮು ಕಾಶ್ಮೀರದ ಉಧಂಪುರ ಉಗ್ರ ದಾಳಿಯಲ್ಲಿ ಜೀವಂತವಾಗಿ ಸೆರೆಸಿಕ್ಕ ಪಾಕ್ ಉಗ್ರ ಮೊಹಮ್ಮದ್ ನಾವೇದ್ ಯಾಕೂಬ್ ಪಾಕಿಸ್ಥಾನ ಮೂಲದವನು ಎನ್ನುವುದಕ್ಕೆ ಇರುವ ಸಾಕ್ಷ್ಯಗಳನ್ನು ನಾಶ ಮಾಡಲು ಪಾಕಿಸ್ತಾನದ ಐಎಸ್ಐ ನಿರತವಾಗಿದೆ ಎಂಬ ವರದಿಗಳು ಹೊರಬಿದ್ದಿವೆ.
ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಈ ಉಗ್ರ ದಕ್ಷಿಣ ಏಷ್ಯಾ ದೇಶದವನು, ಪಾಕಿಸ್ತಾನಿ ಅಲ್ಲ ಎಂಬುದನ್ನು ಸಾಬೀತುಪಡಿಸಲು ಪಣತೊಟ್ಟಿರುವಂತೆ ಪಾಕಿಸ್ತಾನ ನಡೆದುಕೊಳ್ಳುತ್ತಿದೆ.
ನಾವೇದ್ ವಿಚಾರಣೆ ವೇಳೆ ತಾನು ಪಾಕಿಸ್ಥಾನದ ಫೈಸಲಾಬಾದ್‌ನವನೆಂದು ಹೇಳಿಕೊಂಡಿದ್ದ ಅಲ್ಲದೆ ತನ್ನ ಕುಟುಂಬ ವಾಸವಾಗಿರುವ ವಿಳಾಸ ಮತ್ತು ತನ್ನ ಕುಟುಂಬ ಸದಸ್ಯರ ಮೊಬೈಲ್ ಫೋನ್ ನಂಬರ್ ಗಳನ್ನು ಕೂಡ ಕೊಟ್ಟಿದ್ದ. ಆತ ಕೊಟ್ಟ ಮಾಹಿತಿ ಪ್ರಕಾರ ಡಯಲ್ ಮಾಡಲಾದ ನಂಬರ್‌ನ ಕರೆಯನ್ನು ಸ್ವೀಕರಿಸಿದ ವ್ಯಕ್ತಿಯೊಬ್ಬ, ತಾನು ನಾವೇದ್ ನ ನತದೃಷ್ಟ ತಂದೆಯೆಂದೂ, ಪಾಕ್ ಐಎಸ್‌ಐ ನಾವೇದ್ ಸಾಯುವುದನ್ನು ಬಯಸಿತ್ತೆಂದೂ ಹೇಳಿದ್ದ.
ಸದ್ಯ ನಾವೇದ್ ಕುಟುಂಬಸ್ಥರು ನಾಪತ್ತೆಯಾಗಿದ್ದು, ತನಿಖೆಯ ವೇಳೆ ನವೀದ್ ಕೊಟ್ಟಿದ್ದ ಇತರ ಮೊಬೈಲ್ ಸಂಖ್ಯೆಗಳೂ ಈಗ ಸ್ವಿಚ್ ಆಫ್ ಆಗಿವೆ. ಇವುಗಳಲ್ಲಿ ಆತನ ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿಯ ಮೊಬೈಲ್ ನಂಬರ್‌ಗಳೂ ಸೇರಿವೆ. ಈ ನಂಬರ್‌ಗಳು ಈಗಿನ್ನು ಸ್ವಿಚ್ ಆನ್ ಆಗುವ ಪ್ರಶ್ನೆಯೇ ಇಲ್ಲ ಭಾರತೀಯ ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.
ನಾವೇದ್‌ನ ಭಾವ ತಾಹಿರ್, ಅಣ್ಣ ನದೀಮ್ ಯಾಕೂಬ್, ಮಾಜಿ ಉದ್ಯೋಗದಾತ ಸಲಾಮತ್ ಅಲಿ ಮತ್ತು ಲಷ್ಕರ್ ನೇಮಕ ಮೌಲ್ವಿ ಬಶೀರ್ ಇವರೆಲ್ಲರ ಮೊಬೈಲ್ ನಂಬರ್‌ಗಳು ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಾತ್ರವಲ್ಲದೆ ನವೀದ್ ನ ಹೆಸರು, ವಿಳಾಸ, ಫೋಟೋ ಇತ್ಯಾದಿ ವಿವರಗಳನ್ನು ಪಾಕ್ ಅಧಿಕಾರಿಗಳು ರಾಷ್ಟ್ರೀಯ ಜನಸಂಖ್ಯಾ ಮಾಹಿತಿ ದಾಖಲೆಗಳಿಂದ ತೆಗೆದುಹಾಕಿರುವುದು ಗಮನಾರ್ಹವಾಗಿದೆ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.