ಲಕ್ನೋ: ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಅಸಂಬದ್ಧ, ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಉತ್ತರ ಪ್ರದೇಶದ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸೆಪ್ಟಂಬರ್ 18 ರಂದು ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಆಗಸ್ಟ್ 18 ರಂದು ರಾಜ್ಯ ರಾಜಧಾನಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಉಚಿತ ಇ ರಿಕ್ಷಾ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮುಲಾಯಂ ಸಿಂಗ್ ಯಾದವ್ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಒಬ್ಬ ವ್ಯಕ್ತಿ ರೇಪ್ ಮಾಡುತ್ತಾನೆ. ಆದರೆ ದೂರಿನಲ್ಲಿ ನಾಲ್ವರನ್ನು ಹೆಸರಿಸಿರುತ್ತಾರೆ. ನಾಲ್ವರು ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಸೋದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಮುಲಾಯಂ ಹೇಳಿದ್ದರು.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹೊಬ ಜಿಲ್ಲೆಯ ಕುಲ್ಪಾಹಾದ್ ನ್ಯಾಯಾಲಯದ ಸಿವಿಲ್ ಜಡ್ಜ್ ಕುಲ್‌ಪಹಾದ್ ತೆಹ್ಸಿಲ್ ಅಂಕಿತ್ ಗೋಯಲ್ ಮುಲಾಯಂ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಮುಲಾಯಂ ಅವರ ವಿರುದ್ಧ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾಗಿ ಅಂಕಿತ್ ಗೋಯಲ್ ಹೇಳಿದ್ದಾರೆ.
ಅತ್ಯಾಚಾರದ ಕುರಿತು ಸಿಂಗ್ ಅಸಂಬದ್ಧ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಎಪ್ರೀಲ್ ತಿಂಗಳಲ್ಲಿ ಮೊರಾದಾಬಾದ್‌ನಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಲಾಯಂ, “ಹುಡುಗರು ತಪ್ಪು ಮಾಡುವುದು ಸಹಜ. ಅದಕ್ಕಾಗಿ ಅವರನ್ನು ನೇಣಿಗೇರಿಸುವುದು ಸರಿಯಲ್ಲ. ಅತ್ಯಾಚಾರ ವಿರೋಧಿ ಕಾಯಿದೆಯನ್ನು ನಾವು ರದ್ದುಗೊಳಿಸುತ್ತೇವೆ”, ಎಂಬ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆ ಕಾರಣರಾಗಿದ್ದರು.