ಇಂದು ಸೆಲ್ಫಿ ಹುಚ್ಚು ಹೆಚ್ಚುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಮದುವೆ ಫಿಕ್ಸ್ ಆಗಿದ್ದ ನಂತರ ಪುಂಡ ‘ವರ’ನೊಬ್ಬ ಮದುವೆಯಾಗಲಿರುವ ಹುಡುಗಿಗೆ ‘ನಗ್ನ ಸೆಲ್ಫಿ’ ಕಳುಹಿಸುವಂತೆ ಕೇಳಿ ಮದುವೆಯೇ ಮುರಿದುಬಿದ್ದ ಘಟನೆಯೊಂದು ನಡೆದಿದೆ.
ಹೌದು.ಮುಂಬೈ ನ ಥಾನೆಯಲ್ಲಿ ಈ ಘಟನೆ ನಡೆದಿದ್ದು ಕೆಲ ದಿನಗಳ ಹಿಂದಷ್ಟೇ ಇಲ್ಲಿನ ಜೀತೇಂದ್ರ ಠಾಕೂರ್ ಎಂಬಾತನಿಗೆ ಯುವತಿಯೊಬ್ಬಳ ಜತೆ ವಿವಾಹ ನಿಶ್ಚಯವಾಗಿತ್ತು. ಸೆಲ್ಫಿ ಹುಚ್ಚಿನ ಠಾಕೂರ್ ಇದ್ದಕ್ಕಿದ್ದಂತೆ ನಿಶ್ಚಿತಾರ್ಥವಾಗಿರುವ ಯುವತಿಗೆ ನಗ್ನ ಸೆಲ್ಫಿ ಕಳುಹಿಸುವಂತೆ ತಿಳಿಸಿದ್ದು ಅದಕ್ಕೆ ಆಕೆ ನಿರಾಕರಿಸಿದ್ದು ಇದರಿಂದ ತನಗೆ ಈ ಮದುವೆಯೇ ಬೇಡ ಎನ್ನುವ ಮೂಲಕ ನಿಶ್ಚಯವಾಗಿದ್ದ ಸಂಬಂಧವನ್ನೇ ಮುರಿದಿದ್ದಾನೆ.
ಅಷ್ಟೇ ಅಲ್ಲ, ಒಂದೊಮ್ಮೆ ಮದುವೆಯಾಗುವುದಿದ್ದರೆ ಮೂರು ಲಕ್ಷ ರೂಪಾಯಿಗಳ ವರದಕ್ಷಿಣೆ ನೀಡುವಂತೆ ಪಟ್ಟು ಹಿಡಿದಿದ್ದು ಇಲ್ಲದಿದ್ದಲ್ಲಿ ಮದುವೆಯಾಗುವುದಿಲ್ಲ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಇದನ್ನೊಪ್ಪದ ಯುವತಿಯ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ನ್ಯಾಯ ಒದಗಿಸಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.