ದುಬೈ: ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ ಬಂಧಿಸಲ್ಪಟ್ಟು ಜೈಲಿನಲ್ಲಿರುವ ಭಾರತೀಯ ಕೈದಿಗಳ ಬಿಡುಗಡೆಗಾಗಿ ದುಬೈಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ. ಮಾನವೀಯ ನೆಲೆಯಲ್ಲಿ ತಮಗೆ ಆರ್ಥಿಕ ನೆರವು ನೀಡಬೇಕೆಂದು ಕೋರಿರುವ ಭಾರತೀಯ ಕೈದಿಗಳಿಗೆ ಪರಿಹಾರ ಒದಗಿಸಲು ಭಾರತೀಯ ಕಾನ್ಸುಲೇಟ್ ಜನರಲ್(ಸಿಜಿಐ)ನಿಂದ ಪ್ರಾರಂಭಿಸಿರುವ ನೆರವು ಅಭಿಯಾನಕ್ಕೆ ಅನಿವಾಸಿ ಭಾರತೀಯರಾಗಿರುವ ‘ಪ್ಯೂರ್ ಗೋಲ್ಡ್ ಜುವೆಲ್ಲರ್ಸ್’ನ ಸ್ಥಾಪಕ ಹಾಗೂ ಮುಖ್ಯಸ್ಥ ಫಿರೋಝ್ ಮರ್ಚಂಟ್ ಸಹಕರಿಸಲು ಮುಂದಾಗಿದ್ದಾರೆ.
ಅಭಿಯಾನದ ಭಾಗವಾಗಿ ಫಿರೋಝ್ ಮರ್ಚಂಟ್‌ರ ಆರ್ಥಿಕ ನೆರವಿನ ಮೂಲಕ ಇದುವರೆಗೆ ಐವರು ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಕೈದಿಗಳ ಸಾಲಗಳನ್ನು ಇತ್ಯರ್ಥಪಡಿಸಲು ಅವರು ಸುಮಾರು 20 ಸಾವಿರ ಡಾಲರ್‌ಗಳಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ್ದಾರೆ.
‘‘ಸಿಜಿಐಯ ಉಪಕ್ರಮಗಳಿಗೆ ನಾವು ಸದಾ ಬೆಂಬಲ ನೀಡುತ್ತಲೇ ಬಂದಿದ್ದೇವೆ ಮತ್ತು ಈಗ ಅದನ್ನು ಸಾಲ ಮರುಪಾವತಿಸಲಾಗದೆ ಜೈಲಿನಲ್ಲಿರುವವರ ಬಿಡುಗಡೆಗೂ ವಿಸ್ತರಿಸಿದ್ದೇವೆ. ಪ್ರಸಕ್ತ ಐವರು ಕೈದಿಗಳ ಬಿಡುಗಡೆಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ’’ ಎಂದು ಫಿರೋಝ್ ಮರ್ಚಂಟ್ ವಿವರಿಸಿದ್ದಾರೆ.
‘‘ಹಲವು ಮಂದಿ ಭಾರತೀಯರು ದೊಡ್ಡದೊಡ್ಡ ಕನಸುಗಳೊಂದಿಗೆ ಯುಎಇಗೆ ಬರುತ್ತಾರೆ ಮತ್ತು ಈ ನೆಲದಲ್ಲಿ ಏಳಿಗೆಯನ್ನೂ ಸಾಧಿಸುತ್ತಾರೆ. ಆದರೆ ಕೆಲವರು ದುರದೃಷ್ಟಕರ ಸನ್ನಿವೇಶಗಳಲ್ಲಿ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ಒದ್ದಾಡುತ್ತಾರೆ’’ ಎಂದವರು ಅಭಿಪ್ರಾಯಿಸಿದ್ದಾರೆ.
ಸಾಲಪೀಡಿತ ಕೈದಿಗಳ ನಿಜವಾದ ಹಿನ್ನೆಲೆಯನ್ನು ಪರಿಗಣಿಸಿ ನೆರವು ನೀಡಲಾಗುತ್ತಿದೆ ಎಂದು ದುಬೈಯಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ಅನುರಾಗ್ ಭೂಷಣ್ ಹೇಳಿದ್ದಾರೆ.
ಮರ್ಚಂಟ್ ಮಧ್ಯಪ್ರಾಚ್ಯದಲ್ಲಿರುವ ಓರ್ವ ಪ್ರಸಿದ್ಧ ಉದ್ಯಮಿಯಾಗಿದ್ದಾರೆ. ಫೋರ್ಬ್ಸ್ ತಯಾರಿಸಿರುವ 2014ನೆ ಸಾಲಿನ ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಮಾಲಕರ ಪಟ್ಟಿಯಲ್ಲಿ ಫಿರೋಝ್ ಮರ್ಚಂಟ್ 26ನೆ ಸ್ಥಾನ ಗಳಿಸಿದ್ದರು. ಅರೇಬಿಯನ್ ಬಿಸಿನೆಸ್ 2014ರಲ್ಲಿ ಅವರಿಗೆ ಜಿಸಿಸಿಯಲ್ಲಿರುವ ಅತಿಶ್ರೀಮಂತ ಭಾರತೀಯರ ಪಟ್ಟಿಯಲ್ಲಿ 28ನೆ ಸ್ಥಾನ ನೀಡಿದೆ.