ನವದೆಹಲಿ, ಆ.13: ಇತ್ತೀಚೆಗೆ ಹೆಚ್ಚುತ್ತಿರುವ ಮಧುಮೇಹ (ಡಯಾಬಿಟಿಸ್), ಹೃದಯನಾಳ ಸಮಸ್ಯೆ ಹಾಗೂ ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ದೇಶದಲ್ಲಿ ಶೇ.25ರಷ್ಟು ಜನ, ಅದರೆ ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂಬ ಅತ್ಯಂತ ಕಳವಳಕಾರಿ ಅಂಶವೊಂದನ್ನು ಜಾಗತಿಕ ಮಟ್ಟ ಹಾಗೂ ರಾಷ್ಟ್ರ ಮಟ್ಟದ ಕೆಲವು ಸಂಘಟನೆಗಳು ಹೊರಹಾಕಿವೆ.
ಪ್ರತಿ ಭಾರತೀಯ ಪ್ರಜೆಯಲ್ಲಿ ಒಬ್ಬ ವ್ಯಕ್ತಿ ಇಂಥ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಸರಾಸರಿ 70 ವರ್ಷ ವಯೋಮಾನದೊಳಗೇ ಸಾವಿಗೆ ತುತ್ತಾಗುತ್ತಾರೆ. ಪ್ರತಿ ವರ್ಷ ಸುಮಾರು 60 ಲಕ್ಷ ಭಾರತೀಯ ಹೃದಯ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಡಯಾಬಿಟಿಸ್ಗೆ ಬಲಿಯಾಗುತ್ತಿದ್ದಾರೆ.
ಶೇ.14 ರಿಂದ 15ರಷ್ಟು ಜನ ಮೂಳೆ ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿರುವ ತಜ್ಞರು , ಎಚ್ಐವಿ, ಟಿಬಿ ಕಾಯಿಲೆಗಳಂತೆಯೇ ಈ ರೋಗಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇಲ್ಲಿಯವರೆಗೂ ಸರ್ಕಾರಗಳು ಏಡ್ಸ್ ಮತ್ತು ಕ್ಷಯ ರೋಗಗಳ ಬಗ್ಗೆಯೇ ಪ್ರಚಾರ ಕೊಡುತ್ತಿವೆ. ಆದರೆ, ಮನುಷ್ಯರನ್ನು ಒಳಗೊಳಗೇ ಕೊಲ್ಲುತ್ತಿರುವ ಹೃದಯ , ಶ್ವಾಸನಾಳ, ಕ್ಯಾನ್ಸರ್ನಂತಹ ಕಾಯಿಲೆಗಳ ಬಗ್ಗೆಯೂ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಈ ಕಾಯಿಲೆಗಳ ವಿರುದ್ಧ ಹೋರಾಟದ ಜಾಗತಿಕ ಸಂಘಟನೆಯ ಮುಖ್ಯಸ್ಥ ಕೆವಿನ್ ಎಲ್.ವಾಕರ್.
