ಲಕ್ನೋ, ಆ.10- ಸತತ 17 ವರ್ಷಗಳಿಂದ ಹೋರಾಡಿದರೂ ಸರ್ಕಾರದಿಂದ ಪರಿಹಾರ ಪಡೆಯಲು ಸಾಧ್ಯವಾಗದ ಕಾರಣ ಸಾಮೂಹಿಕವಾಗಿ ನೇಣು ಹಾಕಿಕೊಳ್ಳಲು ಅನುಮತಿ ನೀಡುವಂತೆ ಸುಮಾರು 25 ಸಾವಿರಕ್ಕೂ ಹೆಚ್ಚು ರೈತರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.ಗ್ವಾಲಿಯರ್ ಜೈಲಲ್ಲಿರುವ 75 ಮಂದಿ ವ್ಯಾಪಂ ಆರೋಪಿಗಳು ಸಾಯಲು ಅನುಮತಿ ಬೇಡಿದ ಬೆನ್ನಲ್ಲೇ ಅಲ್ಲಿಂದ 175 ಕಿ.ಮೀ. ದೂರದಲ್ಲಿರುವ ಮಥುರಾದ 25 ಸಾವಿರ
ರೈತರು ಜೀವನದ ಸಂಕಷ್ಟಗಳನ್ನೆದುರಿಸಲಾಗದೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿರುವುದು ಈ ದೇಶದ ಪರಿಸ್ಥಿತಿಯ ನಗ್ನ ದರ್ಶನವಾಗಿದೆ. ಅಲ್ಲಿ ಗ್ವಾಲಿಯರ್‌ನಲ್ಲಿ ನ್ಯಾಯಾಂಗದ ಕಾರ್ಯವೈಖರಿ ಬಿಂಬಿತವಾಗಿದ್ದರೆ ಇತ್ತ ಮಥುರಾದಲ್ಲಿ ಶಾಸಕಾಂಗ-ಕಾರ್ಯಾಂಗಗಳ ವೈಫಲ್ಯದ ದರ್ಶನವಾಗಿದೆ.ಮಥುರಾದ ಸುಮಾರು 11 ಹಳ್ಳಿಗಳ ರೈತರ ಅನುಮತಿ ಪಡೆಯದೆಯೇ, ನೂರಾರು ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಸರ್ಕಾರ ಅಲ್ಲಿ ಗೋಕುಲ್ ಬ್ಯಾರೇಜ್ ನಿರ್ಮಾಣ ಕೈಗೊಂಡಿದೆ.
ಆದರೆ, 17 ವರ್ಷಗಳೇ ಕಳೆದರೂ ಭೂಮಿ ಕಳೆದುಕೊಂಡು ಬೀದಿ ಪಾಲಾಗಿರುವ 25 ಸಾವಿರಕ್ಕೂ ಹೆಚ್ಚು ರೈತರಿಗೆ ಸರ್ಕಾರ ನೀಡಬೇಕಾಗಿದ್ದ ಪರಿಹಾರ ಇನ್ನೂ ಕಾಗದಪತ್ರಗಳಲ್ಲೇ ಉಳಿದಿದ್ದು, ಅನೇಕ ರೈತರು ಈಗಾಗಲೇ ಸಾವನ್ನಪ್ಪಿದ್ದಾರೆ. ಅತ್ತ ಬ್ಯಾರೇಜ್ ನಿರ್ಮಾಣವೂ ಇಲ್ಲ, ಇತ್ತ ರೈತರಿಗೆ ಪರಿಹಾರವೂ ಇಲ್ಲ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಈ ರೈತರ ಅಳಲಾಗಿದೆ.