ನವದೆಹಲಿ: ಅಕ್ರಮ ಟೆಲಿಫೋನ್ ಹಗರಣ ಸಂಬಂಧ ಮಾಜಿ ಕೇಂದ್ರ ಸಚಿವ ಹಾಗೂ ಡಿಎಂಕೆ ಮುಖಂಡ ದಯಾನಿಧಿ ಮಾರನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ್ದು, ಮೂರು ದಿನಗಳಲ್ಲಿ ಸಿಬಿಐ ಮುಂದೆ ಶರಣಾಗುವಂತೆ ಆದೇಶ ಹೊರಡಿಸಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್, ಮಾರನ್ ಅವರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದು, ನಂತರ ಸಿಬಿಐ ಅಧಿಕಾರಿಗಳ ಮುಂದೆ ಶರಣಾಗುವಂತೆ ಸೂಚಿಸಿದ್ದಾರೆ.
ದಯಾನಿಧಿ ಮಾರನ್ 2004-07ರಲ್ಲಿ ಕೇಂದ್ರ ದೂರಸಂಪರ್ಕ ಸಚಿವರಾಗಿದ್ದಾಗ ತಮ್ಮ ಮನೆಗೆ ಅಕ್ರಮವಾಗಿ 300ಕ್ಕೂ ಹೆಚ್ಚು ಹೈಸ್ಪೀಡ್ ಟೆಲಿಫೋನ್ ಲೈನ್ ಗಳನ್ನು ಹಾಕಿಸಿಕೊಂಡಿದ್ದರು. ಅಲ್ಲದೇ, ತಮ್ಮ ಸೋದರ ಕಳಾನಿಧಿ ಮಾರನ್ ಒಡೆತನದ ಸನ್ ಟಿವಿ ಚಾನೆಲ್ ಗೂ ಹೈಸ್ಪೀಡ್ ಲೈನ್ ಗಳನ್ನು ಒದಗಿಸಿದ್ದರು.
ಈ ಲೈನ್ ಗಳು ತುಂಬಾ ದುಬಾರಿಯಾದ ಐಎಸ್ ಡಿಎನ್ ಕೇಬಲ್ ಗಳಾಗಿದ್ದು, ದೊಡ್ಡ ಪ್ರಮಾಣದಲ್ಲಿ ದತ್ತಾಂಶವನ್ನು ಸಾಗಿಸಬಲ್ಲುವಾಗಿದೆ. ಸರ್ಕಾರದ ಬೊಕ್ಕಸದಿಂದಲೇ ಮಾರನ್ ಈ ದುಬಾರಿ ಐಎಸ್ ಡಿಎನ್ ಕೇಬಲನ್ನು ಸನ್ ಟಿವಿಗೆ ಒದಗಿಸಿದ್ದರು.
ಸಿಬಿಐ 2011ರಲ್ಲೇ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ದಯಾನಿಧಿ ಮಾರನ್ ಸೇರಿದಂತೆ ಹಲವರ ಮೇಲೆ ಪ್ರಕರಣಗಳನ್ನು ದಾಖಲಿಸಿದೆ. ಸನ್ ಟಿವಿಯ ಸಿಟಿಓ ಎಸ್.ಕಣ್ಣನ್, ಎಲೆಕ್ಟ್ರಿಶಿಯನ್ ಎಲ್.ಎಸ್.ರವಿ ಹಾಗೂ ಮಾರನ್ ಗೆ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯಾಗಿದ್ದ ವಿ.ಗೌತಮನ್ ಅವರನ್ನು ಸಿಬಿಐ ಬಂಧಿಸಿತ್ತು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.