ನವದೆಹಲಿ: ಯಾಕೂಬ್ ಮೆಮನ್ ಗೆ ಗಲ್ಲು ವಿಧಿಸಿರುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ನ ಇಬ್ಬರು ಮುಖಂಡರು ವಿವಾದ ಸೃಷ್ಟಿಸಿದ್ದಾರೆ.
ಮೆಮನ್ ಗೆ ಗಲ್ಲು ಶಿಕ್ಷೆ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಯಾಕೂಬ್ ಪ್ರಕರಣದಲ್ಲಿ ಅವಸರದ ತೀರ್ಮಾನ ಕೈಗೊಳ್ಳಲಾಗಿದ್ದು, ನ್ಯಾಯಾಂಗ ಹಾಗೂ ಸರ್ಕಾರದ ವಿಶ್ವಾಸಾರ್ಹತೆಯನ್ನು ಪಣಕ್ಕಿಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಮತ್ತೋರ್ವ ಕಾಂಗ್ರೆಸ್ ಮುಖಂದ ಶಶಿ ತರೂರ್, ಭಯೋತ್ಪಾದನಾ ನಿಗ್ರಹಕ್ಕೆ ಮರಣದಂಡನೆಯಿಂದ ಉಂಟಾಗುತ್ತಿರುವ ಪರಿಣಾಮವನ್ನೇ ಪ್ರಶ್ನಿಸಿ ಟ್ವಿಟ್ ಮಾಡಿದ್ದಾರೆ. ಕಾಂಗ್ರೆಸ್ ನ ನಾಯಕರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್ ನಾಯಕರು ನ್ಯಾಯಾಂಗವನ್ನೇ ಪ್ರಶ್ನಿಸುವ ರೀತಿ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದಿದೆ ಅಲ್ಲದೇ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸುವ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದೆ.
1993 ರಲ್ಲಿ ನಡೆದಿದ್ದ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗೆ ಜುಲೈ.30 ರಂದು ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, ಭಯೋತ್ಪಾದಕರ ಧರ್ಮವನ್ನು ಗಮನದಲ್ಲಿಟ್ಟುಕೊಳ್ಳದೇ ಇತರ ಉಗ್ರರಿಗೆ ಶಿಕ್ಷೆ ವಿಧಿಸುವಾಗಲೂ ಸರ್ಕಾರ ಹಾಗೂ ನ್ಯಾಯಾಂಗ ಇದೇ ಮಾದರಿಯ ಅತುರವನ್ನು ತೋರಲಿ ಎಂದು ಸಲಹೆ ನೀಡಿದ್ದಾರೆ.
ಉಳಿದ ಉಗ್ರರ ಪ್ರಕರಣಗಳ ವಿಚಾರಣೆಯೂ ಇದೇ ಮಾದರಿಯಲ್ಲಿ ನಡೆಸುವ ಬಗ್ಗೆ ತಮಗೆ ಅನುಮಾನವಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಪ್ರಸ್ತುತ ನ್ಯಾಯಾಂಗ ಹಾಗೂ ಸರ್ಕಾರದ ವಿಶ್ವಾಸಾರ್ಹತೆಯನ್ನು ಪಣಕ್ಕಿಡಲಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮೆಮನ್ ಗೆ ಗಲ್ಲು ಶಿಕ್ಷೆ ಜಾರಿಯಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ನಮ್ಮ ಸರ್ಕಾರ ಒಬ್ಬ ಮನುಷ್ಯನನ್ನು ಗಲ್ಲಿಗೇರಿಸಿದೆ ಎಂದು ತಿಳಿದು ದುಃಖಿತನಾಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಭಯೋತ್ಪಾದನಾ ನಿಗ್ರಹಕ್ಕೆ ಮರಣದಂಡನೆಯಿಂದ ಉಂಟಾಗುತ್ತಿರುವ ಪರಿಣಾಮವೇನು ಎಂದು ಪ್ರಶ್ನಿಸಿದ್ದಾರೆ. ಶಶಿ ತರೂರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್ ಪಕ್ಷ, ಪಕ್ಷಕ್ಕೂ ತರೂರ್ ಹೇಳಿಕೆಗೂ ಸಂಬಂಧವಿಲ್ಲ ಅದು ಅವರ ವಯಕ್ತಿಕ ಅಭಿಪ್ರಾಯ ಎಂದು ಹೇಳಿದೆ.