ನವದೆಹಲಿ: ಪಂಜಾಬ್ ನ ಗುರ್ದಾಸ್ ಪುರದಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಭಾರತ ನಮ್ಮನ್ನು ದೂಷಿಸುತ್ತಿರುವುದು ದುರದೃಷ್ಟಕರ ಎಂದು ಪಾಕಿಸ್ತಾನ ಹೇಳಿದೆ.
ಭಯೋತ್ಪಾದನೆ ನಿಗ್ರಹ ಪರಸ್ಪರ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆಯೇ ಹೊರತು ಆರೋಪ- ಪ್ರತ್ಯಾರೋಪಗಳಿಂದ ಅಲ್ಲ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿದೆ. ಪಂಜಾಬ್ ನ ಗುರ್ದಾಸ್ ಪುರದಲ್ಲಿ ನಡೆದ ಭಯೋತ್ಪಾದಕರ ಕೃತ್ಯದ ಬಗ್ಗೆ ತನಿಖೆ ನಡೆಯುವ ಮುನ್ನವೇ ಪಾಕಿಸ್ತಾನದ ವಿರುದ್ಧ ಆರೋಪ ಮಾಡುವುದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದು ಪಾಕ್ ನ ವಿದೇಶಾಂಗ ವಕ್ತಾರ ಖಾಜಿ ಖಲೀಲುದ್ದೀನ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಜುಲೈ. 27 ರಂದು ಪಂಜಾಬ್ ನ ಗುರ್ದಾಸ್ ಪುರದಲ್ಲಿ ಸೇನಾ ಸಮವಸ್ತ್ರ ಧರಿಸಿ ಬಂದಿದ್ದ ಮೂವರು ಭಯೋತ್ಪಾದಕರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಎಸ್.ಪಿ ಯನ್ನು ಕೊಂಡಿದ್ದರು. ಸತತ 11 ಗಂಟೆ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರು ಹತರಾಗಿದ್ದರು. ಪಂಜಾಬ್ ನಲ್ಲಿ ದಾಳಿ ನಡೆಸಿದ್ದ ಉಗ್ರರು ಪಾಕಿಸ್ತಾನದ ಮೂಲಕ ಭಾರತಕ್ಕೆ ಬಂದಿದ್ದರು ಎಂದು ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.