ರಾಷ್ಟ್ರೀಯ

ಬ್ಯಾಂಕ್ ಕೆಲಸ ಬೇಕಾ..?; ಇಂದಿನವರು ಬಯಸುತ್ತಿರುವುದು ಏನನ್ನು?

Pinterest LinkedIn Tumblr

banking-jobಬ್ಯಾಂಕ್‍ಗಳು ಆರ್ಥಿಕ ಪ್ರಗತಿಯ ಜೀವನಾಡಿಗಳು ಮತ್ತು ಬೆನ್ನೆಲುಬುಗಳು ಕೂಡಾ. ಪ್ರತಿ ಬ್ಯಾಂಕಿನಲ್ಲೂ ಮಾನವ ಸಂಪನ್ಮೂಲ ಇಲಾಖೆ ಈ ನಿಟ್ಟಿನಲ್ಲಿ ಭಾರೀ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ಐಟಿ ಮತ್ತು ಕಾರ್ಪೋರೇಟ್ ಉದ್ಯೋಗದ ನಂತರ ಬ್ಯಾಂಕ್ ಉದ್ಯೋಗಿಗಳು ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದು ಆಕಾಂಕ್ಷಿಗಳು ಭಾರೀ ಸಂಖ್ಯೆಯಲ್ಲಿ ಪ್ರಯತ್ನಿಸುವುದು ಖಚಿತ…

ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕಿಂಗ್ ಉದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಇನ್ನೂ ಒಂದೆರಡು ವರ್ಷ ಈ ಪ್ರಕ್ರಿಯೆ ನಡೆಯಬಹುದು ಎನ್ನುವುದು ವಿವಿಧ ಬ್ಯಾಂಕ್‍ಗಳ  ಮಾನವ ಸಂಪನ್ಮೂಲ ಇಲಾಖೆಗಳ ಅಂಬೋಣ. ಎಪ್ಪತ್ತರ ದಶಕದ ಬ್ಯಾಂಕ್ ರಾಷ್ಟ್ರೀಕರಣದ ನಂತರದ ಮೊದಲ ಹತ್ತು ವರ್ಷಗಳಲ್ಲಿ ಬ್ಯಾಂಕ್ ಸೇರಿದವರು ಈಗ ನಿವೃತ್ತಿ ಹೊಂದುತ್ತಿದ್ದಾರೆ.  2017ರ ಹೊತ್ತಿಗೆ ಸುಮಾರು 5 ಲಕ್ಷ ಉದ್ಯೋಗಿಗಳು ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್‍ಗಳ ಹಣಕಾಸು ಸೇರ್ಪಡೆ ಮತ್ತು ಸರ್ಕಾರದ ಹಣಕಾಸು ಸೌಲಭ್ಯಗಳು ಪ್ರತಿಯೊಬ್ಬರಿಗೂ ಮುಟ್ಟಿಸುವ  ನಿಟ್ಟಿನಲ್ಲಿ ಅವುಗಳು ಶಾಖೆಗಳನ್ನು ವಿಸ್ತರಿಸುತ್ತಿವೆ.

ಈ ರೀತಿಯ ಉದ್ಯೋಗಿಗಳ ನಿರ್ಗಮನದಿಂದ ಗ್ರಾಹಕರ ದಿನನಿತ್ಯದ ಸೇವೆಗೆ ತೊಂದರೆ ಆಗಬಾರದು, ಬ್ಯಾಂಕಿನ ಬೆಳವಣಿಗೆಗೆ ಮತ್ತು ತನ್ಮೂಲಕ ದೇಶದ ಅರ್ಥಿಕ ಪ್ರಗತಿಗೆ ಹಿನ್ನಡೆ ಆಗಬಾರದೆಂದು ಬ್ಯಾಂಕುಗಳು ಗರಿಷ್ಠ ಪ್ರಮಾಣದಲ್ಲಿ ನೇಮಕ ಮಾಡುತ್ತಿವೆ. ಬ್ಯಾಂಕ್‍ಗಳು ಆರ್ಥಿಕ ಪ್ರಗತಿಯ ಜೀವನಾಡಿಗಳು ಮತ್ತು ಬೆನ್ನೆಲುಬುಗಳು ಕೂಡಾ. ಪ್ರತಿ ಬ್ಯಾಂಕಿನಲ್ಲೂ ಮಾನವ ಸಂಪನ್ಮೂಲ ಇಲಾಖೆ ಈ ನಿಟ್ಟಿನಲ್ಲಿ ಭಾರೀ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ಐಟಿ ಮತ್ತು ಕಾರ್ಪೋರೇಟ್ ಉದ್ಯೋಗದ ನಂತರ ಬ್ಯಾಂಕ್ ಉದ್ಯೋಗಿಗಳು ಬೇಡಿಕೆಯಲ್ಲಿ  ಅಗ್ರಸ್ಥಾನದಲ್ಲಿದ್ದು ಆಕಾಂಕ್ಷಿಗಳು ಭಾರೀ ಸಂಖ್ಯೆಯಲ್ಲಿ ಪ್ರಯತ್ನಿಸುವುದು ಖಚಿತ.

ಅದಕ್ಕೂ ಮಿಗಿಲಾಗಿ ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮನೆಗೆ ಕಳುಹಿಸುವ ಪ್ರಕ್ರಿಯೆ ಸ್ವಲ್ಪ ಸುದ್ದಿಯಾಗಿ ಕಾಣುತ್ತಿದೆ. ಉದ್ಯೋಗಾಕಾಂಕ್ಷಿಗಳು ಬ್ಯಾಂಕ್‍ಗಳತ್ತ ಮುಖ ಮಾಡುತ್ತಿದ್ದಾರೆ  ಎಂಬ ಅಭಿಪ್ರಾಯ ಹರಡುತ್ತಿದೆ.

ಹಾಗಾದರೆ, ಇಂದಿನವರು ಉದ್ಯೋಗ ನೀಡುವ ಕಂಪನಿಗಳಿಂದ ಏನೇನನ್ನು ಬಯಸುತ್ತಿದ್ದಾರೆ?

-ಇಂದಿನ ಯುವಜನಾಂಗ ಇಷ್ಟಪಡುವ ಕಾರ್ಪೋರೇಟ್ ಸಂಸ್ಕೃತಿಯ ಕಾರ್ಯ ವೈಖರಿ.

-ಆಹ್ಲಾದಕರವಾದ ಆಫೀಸು ಮತ್ತು ಸಂಪೂರ್ಣ ಗಣಕೀಕೃತ ಉದ್ಯೋಗದ ವಾತಾವರಣ.

-ಸಮಾಧಾನಕರ ಎನ್ನಬಹುದಾದ ಸಂಬಳ ಸೌಲಭ್ಯಗಳು.

-ಕಟ್ಟು- ನಿಟ್ಟಾಗಿ ತಿಂಗಳ ಕೊನೆಗೆ ಸಂಬಳ ಮತ್ತು ಸರ್ಕಾರಿ ನೌಕರಿಯಂತೆ ಉದ್ಯೋಗ ಭದ್ರತೆ.

-ಸಾಕಷ್ಟು ರಜಾವಕಾಶಗಳು, ಪಿಂಚಣಿ ಸಹಿತ ನಿವೃತ್ತಿ ಸೌಲಭ್ಯಗಳು.

-ಕಾಲ-ಕಾಲಕ್ಕೆ ಪದೋನ್ನತಿ ಇದ್ದು, ಇತ್ತೀಚೆಗೆ ಇದು ಶೀಘ್ರ ಗತಿಯಲ್ಲಿ ನಡೆಯುತ್ತಿದೆ.

-ಪ್ರತಿ ವರ್ಷ ಸಂಬಳದಲ್ಲಿ ಅಂಶಿಕ ಹೆಚ್ಚಳ.

-ಪ್ರತಿ ಐದು ವರ್ಷಕ್ಕೊಮ್ಮೆ, ಸ್ವಲ್ಪ ತಡವಾದರೂ ಸಂಬಳ ಪರಿಷ್ಕರಣೆ.

-ಗುಮಾಸ್ತರಿಗೆ ಪ್ರತಿ ಐದು ವರ್ಷಕ್ಕೆ ಮತ್ತು ಅಧಿಕಾರಿಗಳಿಗೆ ಮೂರು ವರ್ಷಗಳಿಗೆ ವರ್ಗಾ-ವರ್ಗಿ ಅಥವಾ ಸ್ಥಳ ಬದಲಾವಣೆ.

-ಪ್ರತಿ ನಾಣ್ಯಕ್ಕೂ ಎರಡು ಮುಖಗಳು ಇರುವಂತೆ, ಸಿಹಿ ಸಂಗಡ ಕಹಿಯೂ ಬರುವಂತೆ, ಬ್ಯಾಂಕ್ ಉದ್ಯೋಗದಲ್ಲಿಯೂ ಅದರದೇ ಆದ ಹೊರನೋಟಕ್ಕೆ ಕಾಣದ, ಜನಸಾಮಾನ್ಯರಿಗೆ ತಿಳಿಯದ  ಸಮಸ್ಯೆಗಳು ಇವೆ. ಅದು ಹೊರಗಿನಿಂದ ನೋಡುವದಕ್ಕಿಂತ ಭಿನ್ನವಾಗಿರುತ್ತದೆ.

ಸಮಸ್ಯೆಗಳೇನು?

-ನೇಮಕಾತಿ ಆದೇಶದ ಮೊದಲನೇ ಕಟ್ಟಳೆ-ದೇಶಾದ್ಯಂತ ವರ್ಗಾವರ್ಗಿ (ಅಧಿಕಾರಿಗಳಿಗೆ) ಮತ್ತು ಗುಮಾಸ್ತರಿಗೆ ಭಾಷಾ ಪ್ರದೇಶದಲ್ಲಿ. (ಈ ನಿಯಮಾಳಿ ಈಗ ಸಡಿಲವಾದಂತೆ ಕಾಣುತ್ತಿದ್ದು,  ಗುಮಾಸ್ತರೂ ಹೊರರಾಜ್ಯದಿಂದ ಬರುತ್ತಿದ್ದಾರೆ).

-ಈ ವರ್ಗಾವರ್ಗಿ ಅಧಿಕಾರಿಗಳಿಗೆ ಮೂರು ವರ್ಷಕ್ಕೊಮ್ಮೆ (ದೇಶಾದ್ಯಂತ) ಮತ್ತು ಗುಮಾಸ್ತರಿಗೆ ಐದು ವರ್ಷಕ್ಕೊಮ್ಮೆ. ಸತತ ವರ್ಗಾವರ್ಗಿಯಿಂದ ಮಕ್ಕಳ ಶಿಕ್ಷಣದ ಮೇಲೆ ಅಡ್ಡ  ಪರಿಣಾಮವಾಗುತ್ತದೆ. ಶಿಕ್ಷಣ ವೆಚ್ಚದಾಯಕವಾಗುತ್ತದೆ. ನಿವೃತ್ತಿಗೆ ನಾಲ್ಕು ಕಾಸು ಉಳಿಸಲಾಗದು ಎನ್ನುವ ಚಿಂತೆ.

-ಸೇವೆಯ ಕೊನೆಯವರೆಗೂ ಒಂದು ಸ್ಥಳದಲ್ಲಿ ನೆಲೆ ನಿಲ್ಲಲು ಸಾಧ್ಯವಿಲ್ಲ.

-ಕೆಲಸದ ಪ್ರತಿ ಹಂತದಲ್ಲೂ ಉತ್ತರದಾಯಿತ್ವ ಮತ್ತು ಜವಾಬ್ದಾರಿ ಇದೆ. ನಿವೃತ್ತಿಯ ಬಳಿಕವೂ ಅದು ಬೆನ್ನು ಬಿಡದೆ ಇರುತ್ತದೆ.

-ಅಧಿಕಾರಿಗಳಿಗೆ ನಿಗದಿತ ಕೆಲಸದ ಅವಧಿ ಇಲ್ಲ ಎನ್ನುವ ತಕರಾರು. ಒಂದು ರೀತಿಯಲ್ಲಿ ಅನಿಯಮಿತ ಕೆಲಸದ ಅವಧಿ.

-ಕೆಲಸದಲ್ಲಿ ಸತತ ಒತ್ತಡ ಮತ್ತು ಇತ್ತೀಚೆಗೆ ಗುರಿ ಮುಟ್ಟುವ ಕೆಲಸ.

-ನಿರೀಕ್ಷೆಯ ಮಟ್ಟದಲ್ಲಿ ಸಂಬಳದಲ್ಲಿ ಪ್ರತಿವರ್ಷ ಹೆಚ್ಚಳವಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಸಂಬಳ- ಸೌಲಭ್ಯ ಪರಿಷ್ಕರಣೆ.

ದಶಕಗಳ ಹಿಂದೆ ಬ್ಯಾಂಕ್ ಶಾಖೆಗಳು ತಾಲೂಕು ಮಟ್ಟದವರೆಗೆ ಅಥವಾ ದೊಡ್ಡ ಹಳ್ಳಿಗಳಿಗೆ ಸೀಮಿತವಾಗಿದ್ದವು. ಆದರೆ, ಸರ್ಕಾರದ ಹಣಕಾಸು ಸೇರ್ಪಡೆ ಮತ್ತು ಗ್ರಾಹಕನ ಮನೆ ಬಾಗಿಲಿಗೆ   ಬ್ಯಾಂಕಿಂಗ್ ಸೇವೆ ತಲುಪಿಸುವ ಕಾರ್ಯಕ್ರಮದ ಅಂಗವಾಗಿ ನೀರು- ರಸ್ತೆಗಳು ಸರಿಯಾಗಿಲ್ಲದ, ಕನಿಷ್ಠ ನಾಗರಿಕ ಸೌಲಭ್ಯವಿಲ್ಲದ ಹಳ್ಳಿ ಗಳಲ್ಲೂ ಶಾಖೆಗಳನ್ನು ತೆರೆಯಲಾಗುತ್ತಿದೆ. ಉದ್ಯೋಗಿಗಳು ಆ ಪ್ರದೇಶಗಳಿಗೆ ಹೋಗಲು ಹಿಂಜರಿಯುತ್ತಾರೆ.

ವಿವಿಧ ಬ್ಯಾಂಕ್‍ನವರು ಉದ್ಯೋಗಕ್ಕಾಗಿ ಅರ್ಜಿ ಕರೆದಾಗ ಲಕ್ಷಾಂತರ ಜನರು ಅರ್ಜಿ ಹಾಕುತ್ತಾರೆ. ಅವರು ಬ್ಯಾಂಕ್ ನೌಕರಿಯ ಒಂದೇ ಮುಖವನ್ನು ನೋಡಿರುತ್ತಾರೆ. ಕಷ್ಟಪಟ್ಟು ಓದಿ ಪಾಸಾಗಿ,  ಸಂದರ್ಶನದಲ್ಲಿ ತೇರ್ಗಡೆಯಾಗಿ ಉದ್ಯೋಗ ಹಿಡಿಯುತ್ತಾರೆ. ಆದರೆ ಕೆಲವೇ ತಿಂಗಳಲ್ಲಿ ಬ್ಯಾಂಕ್ ನೌಕರಿಯ ಮತ್ತೊಂದು ಮುಖವನ್ನು ನೋಡಿ, ಪುನಃ ಉದ್ಯೋಗಕ್ಕಾಗಿ ಶೋಧ ಕಾರ್ಯ  ನಡೆಸುತ್ತಾರೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಎಷ್ಟೋ ಜನರಿಗೆ ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಇನ್ನೊಂದು ಉದ್ಯೋಗ ಸಿಕ್ಕಿದ ಕೂಡಲೇ ತಕ್ಷಣ ಜಾಗ ಖಾಲಿ ಮಾಡುತ್ತಾರೆ ಎನ್ನುವುದು ಬ್ಯಾಂಕಿಂಗ್ ಕ್ಷೇತ್ರದ ಹಿರಿಯರ ಅಭಿಪ್ರಾಯ.

Write A Comment