ಕುರಿ ಕಾಯಲು ಹೋಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬ ಗ್ರಾಮಸ್ಥರ ಕೈಯಿಂದ ಪೆಟ್ಟು ತಿಂದು ಸಾವನ್ನಪ್ಪಿದ ಘಟನೆ ನಡೆದಿದೆ.
ಬಿಹಾರದ ಸಮಷ್ಠಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು 12 ವರ್ಷದವಳಾಗಿದ್ದು ಕುರಿಗಳನ್ನು ಮೇಯಿಸಲು ಹೊಲಕ್ಕೆ ಹೋಗಿದ್ದಳು. ಈ ಸಮಯದಲ್ಲಿ ಅಲ್ಲಿಗೆ ಬಂದ ಕಾಮುಕ ಆಕೆಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಏಕಾಏಕಿ ತನ್ನ ಮೇಲೆ ನಡೆದ ಈ ದಾಳಿಯಿಂದ ಬಾಲಕಿ ಕೂಗಿಕೊಂಡಿದ್ದು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲ ಗ್ರಾಮಸ್ಥರು ಓಡಿ ಬಂದು ಬಾಲಕಿಯನ್ನು ರಕ್ಷಿಸುವುದರ ಜತೆಗೆ ಆರೋಪಿಗೆ ಮನಬಂದಂತೆ ಚಚ್ಚಿದ್ದಾರೆ. ಗ್ರಾಮಸ್ಥರ ಹೊಡೆತಕ್ಕೆ ಸಿಕ್ಕ ಆರೋಪಿ ಸಾವನ್ನಪ್ಪಿದ್ದು ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಇನ್ನುಳಿದ ೧೨ ಮಂದಿಯ ಪತ್ತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಅಲ್ಲದೇ ಈಗಾಗಲೇ ಈ ಹಳ್ಳಿಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.